ಉಳ್ಳಾಲ: ಹರೇಕಳ ಮುಖ್ಯರಸ್ತೆಯಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು, ಸ್ಥಳೀಯವಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಹರೇಕಳ ಕಡವಿನ ಬಳಿಯಿಂದ ಗ್ರಾಮಚಾವಡಿಗೆ ಹೋಗುವ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಇಕೋ ಕಾರೊಂದು ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಹಲವರು ಸಂಚರಿಸಿದ್ದರೂ ಕಾರು ಕಂಡುಬಂದಿರಲಿಲ್ಲ ಎನ್ನಲಾಗಿದ್ದು, ಬೆಳಗ್ಗೆ ಏಕಾಏಕಿ ಕಾರು ಪತ್ತೆಯಾಗಿದೆ.
ಈ ಕಾರು ಎಲ್ಲಿಂದ ಬಂದಿದೆ? ಇದರ ಹಿನ್ನೆಲೆ ಏನು? ಸುಟ್ಟುಹೋಗಿದ್ದಾದರೂ ಹೇಗೆ? ಕಾರು ಸಂಚರಿಸುತ್ತಿದ್ದ ಸಂದರ್ಭದಲ್ಲೇ ಬೆಂಕಿಗೆ ಆಹುತಿಯಾಯಿತೇ? ಎನ್ನುವ ಮಾಹಿತಿ ಸ್ಥಳೀಯವಾಗಿ ಯಾರಲ್ಲೂ ಇಲ್ಲದ ಕಾರಣ ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆ ಸಂದರ್ಭ ಕಾರಿನಲ್ಲಿ ಪ್ರಯಾಣಿಕರಿದ್ದರೇ? ಹಾಗಾಗಿದ್ದರೆ ಕಾರು ಯಾರದ್ದು? ಚಾಲಕ ಎಲ್ಲಿದ್ದಾರೆ ಎನ್ನುವ ನೂರೆಂಟು ಪ್ರಶ್ನೆಗಳು ಎದ್ದಿವೆ. ವಿಮಾ ಹಣಕ್ಕಾಗಿ ಹಳೆಯ ಕಾರನ್ನು ತಂದು ಬೆಂಕಿ ಕೊಡಲಾಗಿದೆಯೇ? ಅಥವಾ ಕಾನೂನುಬಾಹಿರ ಕೃತ್ಯಕ್ಕೆ ಬಳಸಲಾಗಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸುವ ಕಾರ್ಯ ಪೊಲೀಸ್ ಇಲಾಖೆ ಮಾಡಬೇಕು ಎನ್ನುವ ಮಾತುಗಳು ಕೇಳಿಬಂದಿದೆ.