ಮಂಗಳೂರು: ನಗರದ ಯೆಯ್ಯಡಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಕಾರಿನ ಚಾಲಕ ವಿನೋದ್ ಕುಮಾರ್ ಎಂಬಾತನಿಗೆ ನ್ಯಾಯಾಲಯ 15 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 16,500 ರೂ. ದಂಡ ವಿಧಿಸಿದೆ.
2023ರ ಜೂ.11ರಂದು ಕಾರು ಚಾಲಕ ವಾಮಂಜೂರು ಸಂತೋಷ ನಗರ ನಿವಾಸಿ ವಿನೋದ್ ಕುಮಾರ್ ಮೇರಿಹಿಲ್ ಕಡೆಯಿಂದ ಕೆಪಿಟಿ ಕಡೆಗೆ ಸಾಗುವ ರಸ್ತೆಯಲ್ಲಿ ವೇಗವಾಗಿ ಚಲಾಯಿಸಿಕೊಂಡು ಬಂದು ನಗರದ ಯೆಯ್ಯಡಿ ಜಂಕ್ಷನ್ ನ ತೆರೆದ ಡಿವೈಡರ್ ಬಳಿ ಬೈಕ್ ಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ನಲ್ಲಿ ಶಕ್ತಿನಗರಕ್ಕೆ ಹೋಗುತ್ತಿದ್ದ ಸವಾರ ವೀರಪ್ಪ ವೀರಭದ್ರಪ್ಪ ಹಾಲಿಗೇರಿ ಹಾಗೂ ಸಹ ಸವಾರನಾಗಿದ್ದ ಅವರ ಪುತ್ರ ಗಾಯಗೊಂಡಿದ್ದರು. ಅಪಘಾತದಲ್ಲಿ ವೀರಪ್ಪ ಕಾರಿನ ಮುಂಭಾಗದ ಗಾಜಿಗೆ ಬಿದ್ದು ಬಳಿಕ ರಸ್ತೆಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರ ಪುತ್ರ ಸಾಮಾನ್ಯ ಸ್ವರೂಪದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ತನಿಖೆ ವೇಳೆ ಅಪಘಾತ ಕ್ಕೆ ಕಾರಣವಾದ ಕಾರಿನ ವಿಮಾ ಪತ್ರ ಮತ್ತು ವಾಯು ಮಾಲಿನ್ಯ ತಪಾಸಣಾ ಪ್ರಮಾಣ ಪತ್ರ ಊರ್ಜಿತದಲ್ಲಿ ಇಲ್ಲದಿರುವುದು ತಿಳಿದು ಬಂದಿತ್ತು. ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸಿದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರು ಜೆ.ಎಂ.ಎಫ್. ಸಿ 8ನೇ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ. ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜ.7ರಂದು ಕಾರು ಚಾಲಕನಿಗೆ 15 ತಿಂಗಳ ಸಾದಾ ಜೈಲು ವಾಸ ಹಾಗೂ 16,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗೀತಾ ರೈ ಅವರು ಭಾಗಶಃ ಸಾಕ್ಷಿ ವಿಚಾರಣೆ ನಡೆಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕ ಅರೋನ್ ಡಿಸೋಜ ವಿಟ್ಲ ಉಳಿದ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.