ಕ್ಯಾಂಪ್ಕೊದ 2025-30 ರ ಅವಧಿಗೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ ಆಯ್ಕೆಯಾಗಿದ್ದಾರೆ. 
ದಕ್ಷಿಣ ಕನ್ನಡ

ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ

ಮಂಗಳೂರು: ಕರ್ನಾಟಕ ಹಾಗೂ ಕೇರಳ ರಾಜ್ಯದ ಕೃಷಿಕರ ಅಂತಾರಾಜ್ಯ ಸಂಸ್ಥೆ ಕ್ಯಾಂಪ್ಕೊದ 2025-30 ರ ಅವಧಿಗೆ ನೂತನ ಅಧ್ಯಕ್ಷರಾಗಿ ಎಸ್.ಆರ್.ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ನಿರ್ದೇಶಕರ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿದ್ದ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪ್ರಕ್ರಿಯೆ ನಡೆಸಿ ಕೊಟ್ಟರು. ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರ ಹೆಸರಿನ ಪಟ್ಟಿ ನವದೆಹಲಿಯ ಸಹಕಾರ ಸಚಿವಾಲಯದ ಅಡಿಯಲ್ಲಿ ಬರುವ ಸಹಕಾರಿ ಚುನಾವಣಾ ಪ್ರಾಧಿಕಾರದ ಅಧಿಕೃತ ಅನುಮೋದನೆ ಪಡೆದ ಬಳಿಕ ಅಧಿಕೃತ ಘೋಷಣೆಯಾಗಲಿದೆ.
ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ಇವರು ಸತತ ಮೂರನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸತೀಶ್ಚಂದ್ರ ಅವರು ಮೊದಲ ಅವಧಿಯಲ್ಲೇ ಕ್ಯಾಂಪ್ಕೊ ಅಧ್ಯಕ್ಷರಾಗಿದ್ದರು. ಪ್ರಸ್ತುತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪದ್ಮರಾಜ ಪಟ್ಟಾಜೆ ಅವರು ಮೊದಲ ಬಾರಿಗೆ ಉಪಾಧ್ಯಕ್ಷರಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 19 ನಿರ್ದೇಶಕರ ಪೈಕಿ ಕೇರಳದ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕರ್ನಾಟಕದ 10 ನಿರ್ದೇಶಕರಲ್ಲಿ 4 ಮಂದಿ ಅವಿರೋಧವಾಗಿ ಹಾಗೂ 6 ಮಂದಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದರು.
ದಯಾನಂದ ಹೆಗ್ಡೆ ಕಾರ್ಕಳ, ಎಂ.ಮಹೇಶ್ ಚೌಟ ಬಂಟ್ವಾಳ, ರಾಧಾಕೃಷ್ಣ ಹೊಸದುರ್ಗ, ಸತ್ಯನಾರಾಯಣ ಪ್ರಸಾದ್ ಕಾರಡ್ಕ,
ರಾಘವೇಂದ್ರ ಎಚ್.ಎಂ. ಗರ್ತಿಕೆರೆ, ಸತೀಶ್ಚಂದ್ರ ಭಂಡಾರಿ ಮಂಜೇಶ್ವರ, ತೀರ್ಥರಾಮ ಎ.ವಿ. ಸುಳ್ಯ, ಪುರುಷೋತ್ತಮ ಭಟ್ ಮಂಗಳೂರು, ವೆಂಕಟ್ರಮಣ ಭಟ್ ವೈ. ಪಡ್ರೆ, ವಿವೇಕಾನಂದ ಗೌಡ ಕಾಸರಗೋಡು, ಸದಾನಂದ ಶೆಟ್ಟಿ ಮಂಜೇಶ್ವರ, ಮುರಳಿಕೃಷ್ಣ ಕೆ.ಎನ್. ಸುಳ್ಯ, ಗಣೇಶ್ ಕುಮಾರ್ ಸುಳ್ಯ, ಸೌಮ್ಯ ಪ್ರಕಾಶ್ ಮದಂಗಲ್ಲು ಮಂಜೇಶ್ವರ, ವಿಶ್ವನಾಥ್ ಈಶ್ವರ ಹೆಗಡೆ ಕುಮಟಾ ಹಾಗೂ ಗಣೇಶ್ ಬಂಟ್ವಾಳ ನಿರ್ದೇಶಕರಾಗಿದ್ದಾರೆ.