ಕೆ.ಎ.ಅಬ್ದುಲ್ಲ
ದಕ್ಷಿಣ ಕನ್ನಡ

ಹೊಳೆಯಲ್ಲಿ ಮುಳುಗಿ ಬಾಲಕ ಸಾವು

ಮಾನ್ಯ ಮುಟ್ಟತ್ತೋಡಿಯಲ್ಲಿ ಮಧುವಾಹಿನಿ ಹೊಳೆಯಲ್ಲಿ ಮುಳುಗಿ 8ರ ಹರೆಯದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.

ಕಾಸರಗೋಡು: ಮಾನ್ಯ ಮುಟ್ಟತ್ತೋಡಿಯಲ್ಲಿ ಮಧುವಾಹಿನಿ ಹೊಳೆಯಲ್ಲಿ ಮುಳುಗಿ 8ರ ಹರೆಯದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಮುಟ್ಟತ್ತೋಡಿ ಕಲ್ಲಕಟ್ಟ ಕೋಪ ಕಡಂಬಟ್ಟಿ ಹೌಸ್‌ನ ಕೆ.ಅಬ್ದುಲ್ ರಹ್ಮಾನ್-ಆಯಿಷತ್ ಶಿಬೀನಾ ದಂಪತಿ ಪುತ್ರ, ಮಾನ್ಯದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಕೆ.ಎ.ಅಬ್ದುಲ್ಲ ಮೃತ ಬಾಲಕ.

ತಂದೆ ಅಬ್ದುಲ್ ರಹ್ಮಾನ್, ಸಹೋದರಿ ಖದೀಜತ್ ಶೈಮಾ ಹಾಗೂ ತಂದೆಯ ಸಹೋದರಿಯ ಪುತ್ರಿ ಜತೆ ಅಬ್ದುಲ್ಲ ಕೋಪಾ ಸೇತುವೆ ಸಮೀಪದ ಮಧುವಾಹಿನಿ ಹೊಳೆ ಬಳಿ ನಿಂತಿದ್ದ. ದಡದಲ್ಲಿ ನಿಂತಿದ್ದ ಪುತ್ರ ಅಬ್ದುಲ್ಲ ನಾಪತ್ತೆಯಾಗಿದ್ದು, ಹುಡುಕಾಡುವಾಗ ಬಾಲಕ ನೀರಿನಲ್ಲಿ ಮುಳುಗೇಳುತ್ತಿರುವುದು ಕಂಡು ಬಂದಿದೆ. ತಕ್ಷಣ ಆತನನ್ನು ಮೇಲಕ್ಕೆತ್ತಿ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದು ಬಳಿಕ ಚೆಂಗಳದ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಬಾಲಕ ಬದುಕುಳಿಯಲಿಲ್ಲ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿಯಲ್ಲಿ ಕೋಳಿ ಅಂಕಕ್ಕೆ ದಾಳಿ

ಬೆಳ್ತಂಗಡಿ: ತಾಲೂಕಿನ ಬಡಕೋಡಿ ಗ್ರಾಮದ ಕಿರಿಂಬಿದಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ, ನಾಲ್ಕು ಹುಂಜ ಹಾಗೂ 17 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು 27 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವೇಣೂರು ಠಾಣೆ ಪಿಎಸ್‌ಐ ಅಕ್ಷಯ್ ಡವಗಿ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೀಟ್ ಸಿಬ್ಬಂದಿ ಪುಂಡಲೀಕಪ್ಪ ಅವರಿಗೆ ಕಿರಿಂಬಿ ಬಳಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಪೊಲೀಸರು ಸ್ಥಳಕ್ಕೆ ತೆರಳಿದಾಗ 25 ರಿಂದ 30 ಮಂದಿ ಕೋಳಿ ಅಂಕದಲ್ಲಿ ತೊಡಗಿದ್ದರು. ಪೊಲೀಸರನ್ನು ಕಂಡು ಆರೋಪಿಗಳು ಕೋಳಿಗಳೊಂದಿಗೆ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಿರಿಂಬಿ ನಿವಾಸಿ ಸುನೀಲ್ (34), ಹೊಸಂಗಡಿ ಗ್ರಾಮದ ವಿಶ್ವನಾಥ (36) ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಒಟ್ಟು 27 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿದ್ದ 4 ಹುಂಜ, 17 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.