ಡಾ. ಚಲಪತಿ ಅವರು ‘ಆದಿಮ’ ಕೃತಿ ಬಿಡುಗಡೆಗೊಳಿಸಿದರು. ಸದಾಶಿವ, ತಾರಾನಾಥ ಗಟ್ಟಿ ಕಾಪಿಕಾಡ್, ಚಂದ್ರಕಲಾ ನಂದಾವರ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಡಾ.ವಾಮನ ನಂದಾವರ ಅವರ ಸಂಸ್ಮರಣೆ - ಕೃತಿ ಬಿಡುಗಡೆ

ಮಂಗಳೂರು: ಜನಪದ ಸಂಶೋಧಕರಾಗಿದ್ದ ಡಾ.ವಾಮನ ನಂದಾವರ ಅವರು ವೈಯಕ್ತಿಕ ನೆಲೆಯಲ್ಲಿ ನಡೆಸಿದ ಅಧ್ಯಯನ ಕೇವಲ ಕರಾವಳಿಯ ಜನಪದೀಯ ಹಾಗೂ ಜನಾಂಗೀಯ ಅಧ್ಯಯನಕ್ಕೆ ಮಾತ್ರ ಸೀಮಿತವಾದುದಲ್ಲ, ಅದು ಒಟ್ಟು ಕರ್ನಾಟಕದ ಒಳಗೆ ಜನಪದೀಯವಾಗಿ ಜನಾಂಗೀಯ ಅಧ್ಯಯನವನ್ನು ಹೇಗೆ ಮಾಡಬೇಕೆಂಬ ಮಾದರಿಯನ್ನು ತೋರಿಸಿ ಕೊಟ್ಟಿತು ಎಂದು ಮೈಸೂರು ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕ ಡಾ. ಚಲಪತಿ ಹೇಳಿದರು .
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಕೃತಿ ಆಶಯ ಪಬ್ಲಿಕೇಷನ್ಸ್ ಸಹಯೋಗದೊಂದಿಗೆ ತುಳು ಅಕಾಡೆಮಿಯಲ್ಲಿ ಶನಿವಾರ ನಡೆದ ಜನಪದ ವಿದ್ವಾಂಸ ಹಾಗೂ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ಅವರ ಸಂಸ್ಮರಣೆ ಹಾಗೂ ಚಂದ್ರಕಲಾ ನಂದಾವರ ಅವರು ಸಂಪಾದಿಸಿದ ನಂದಾವರ ಅವರ ಜಾತಿ ಜನಾಂಗಗಳ ಅಧ್ಯಯನ ಕೃತಿ ‘ಆದಿಮ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶೈಕ್ಷಣಿಕ ವ್ಯಾಪ್ತಿಯಲ್ಲಿ ಜನಪದ ಅಧ್ಯಯನ ಆರಂಭವಾಗುತ್ತಿದ್ದ ಎಂಬತ್ತರ ದಶಕದಲ್ಲಿ ವಾಮನ ನಂದಾವರ ಅವರು ಕೈಗೊಂಡ ಅಧ್ಯಯನ ಮಾರ್ಗವು ಜನಪದ ಅಧ್ಯಯನ ಲೋಕದಲ್ಲಿ ಒಂದು ವಿಭಿನ್ನ ಮಾದರಿಯಾಗಿದೆ ಎಂದು ಚಲಪತಿಯವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಕೃತಿಗಳ ಬಿಡುಗಡೆಯನ್ನು ಮಾಡಿದರು. ನಂದಾವರ ಅವರು ತುಳು ಸಂಶೋಧಕನಾಗಿ ಕಾರ್ಯನಿರ್ವಹಿಸಿದಷ್ಟೇ ಕಾಳಜಿಯಲ್ಲಿ ತುಳುವಿನ ಕಾರ್ಯಕರ್ತ ಹಾಗೂ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟರು.
ಉಚ್ಚಿಲ ಕಲಾ ಗಂಗೋತ್ರಿ ನಿರ್ದೇಶಕರಾದ ನಿವೃತ್ತ ಪ್ರಾಂಶುಪಾಲ ಸದಾಶಿವ ಅವರು ‘ವಾಮನ ನಂದಾವರ’ ಚಾವಡಿಯ ನಾಮ ಫಲಕವನ್ನು ಅನಾವರಣಗೊಳಿಸಿದರು. ಡಾ.ವಾಮನ ನಂದಾವರ ಅವರ ‘ತಾಳಮೇಳ’ ಕೃತಿಯನ್ನು ಪರಿಚಯಿಸಿದ ಕವಯಿತ್ರಿ ಜ್ಯೋತಿ ಮಹಾದೇವ ಅವರು, ನಂದಾವರ ಅವರ ಕವನಗಳಲ್ಲಿ ವಿಶಿಷ್ಟವಾದ ಭಾಷಾ ಪ್ರಯೋಗವನ್ನು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದೆ ರತ್ನಾವತಿ ಬೈಕಾಡಿ ಅವರನ್ನು ಸನ್ಮಾನಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಬಾಬು ಪಾಂಗಳ ಅವರು ಉಪಸ್ಥಿತರಿದ್ದರು.
ತುಳು ಅಕಾಡೆಮಿಯ ಮಾಜಿ ಸದಸ್ಯ ಬೆನೆಟ್ ಅಮ್ಮಣ್ಣ ಕಾರ್ಯಕ್ರಮ ನಿರೂಪಿಸಿದರು. ಆಕೃತಿ ಆಶಯ ಪ್ರಕಾಶಕರಾದ ಕಲ್ಲೂರು ನಾಗೇಶ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು . ಚಂದ್ರಕಲಾ ನಂದಾವರ ವಂದಿಸಿದರು.