ಉಳ್ಳಾಲ: ಉತ್ತರಾಖಂಡದ ಚಾರ್‌ಧಾಮ್‌ಗೆ ಯಾತ್ರೆಗೆ ತೆರಳಿ ಯಮುನೋತ್ರಿ ದೇವಸ್ಥಾನದ ಹೊರ ಆವರಣದಲ್ಲಿ ಕುಳಿತಿದ್ದ ಸಂದರ್ಭ ಹೃದಯಾಘಾತದಿಂದ ಸಾವೀಗೀಡಾದ ಕುಂಪಲ ವಿದ್ಯಾನಗರ ನಿವಾಸಿ ರಾಜೇಶ್ ಪೂಜಾರಿ(53) ಮೃತದೇಹ ಗುರುವಾರ ಊರಿಗೆ ತಲುಪಿದೆ.
ಸೆ.18ರಂದು 15 ಮಂದಿಯ ತಂಡದೊಂದಿಗೆ ತೊಕ್ಕೊಟ್ಟಿನಿಂದ ಉತ್ತರಾಖಂಡದ ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಬದರಿನಾಥ್, ಕೇದಾರನಾಥ್, ಹರಿದ್ವಾರ ಯಾತ್ರೆಗೆ ತೆರಳಿದ್ದರು. ಮಂಗಳವಾರ ಯಮುನೋತ್ರಿ ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿದ ಬಳಿಕ ಆವರಣದಲ್ಲಿ ಕುಳಿತಿದ್ದಾಗ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉತ್ತರಾಖಂಡದ ಯಮುನೋತ್ರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೇದಾರ್ ಸಿಂಗ್ ರಾವತ್ ಅವರನ್ನು ಸಂಪರ್ಕಿಸಿ ಸಹಾಯ ಕೋರಿದ್ದರು. ಮಾಜಿ ಶಾಸಕರು ಡೆಹ್ರಾಡೂನ್ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದು ವಿಮಾನದ ಮೂಲಕ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ 10ಕ್ಕೆ ಊರಿಗೆ ತಲುಪಿದ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.