ವಿವಿಧ ವಲಯಗಳ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ರಾಜಾಜಿ ಪಾರ್ಕ್‌ನಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು.
ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದ್ದು, ಕಾರ್ಮಿಕರೆಲ್ಲರೂ ಸಂಘಟಿತರಾಗಿ ಹೋರಾಡಬೇಕಾದ ಸಮಯ ಹತ್ತಿರ ಬಂದಿದೆ. ಕಾರ್ಮಿಕರ ಹಕ್ಕುಗಳ ಈಡೇರಿಕೆಗೆ ಬಿಎಂಎಸ್ ಸದಾ ಮಂಚೂಣಿಯಲ್ಲಿ ನಿಂತು ಹೋರಾಡಲಿದೆ. ಸರ್ಕಾರ ಕಾರ್ಮಿಕರನ್ನು ಹಗುರವಾಗಿ ಪರಿಗಣಿಸಬಾರದು ಎಂದು ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಎಚ್ಚರಿಸಿದ್ದಾರೆ.
ವಿವಿಧ ವಲಯಗಳ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಗರದ ರಾಜಾಜಿ ಪಾರ್ಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾಗರಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ದಿನ ತಡವಾಗಿ ಪ್ರತಿಭಟನೆ ನಡೆಸಿದ್ದರೂ, ಕಾರ್ಮಿಕರ ಬೃಹತ್ ಭಾಗವಹಿಸುವಿಕೆ ಹೋರಾಟಕ್ಕೆ ಆನೆಬಲ ತಂದಿದೆ. ಬಿಎಂಎಸ್ ಸರ್ಕಾರದ ಎದುರು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಬೃಹತ್ ರೂಪದಲ್ಲಿ ಹೋರಾಟವನ್ನು ಸಂಘಟಿಸಲಾಗುವುದು. ಜಿಲ್ಲಾ ಕೇಂದ್ರ ಮಾತ್ರವಲ್ಲ, ಪ್ರತಿ ತಾಲೂಕು ಮಟ್ಟದಲ್ಲೂ ಭಾರೀ ಪ್ರತಿಭಟನೆಗಳನ್ನು ಆಯೋಜಿಸಲಾಗುವುದು ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ದೇಶದ ಒಟ್ಟು ಶ್ರಮಿಕ ವರ್ಗದಲ್ಲಿ ಶೇ.94ರಷ್ಟು ಜನರು ಅಸಂಘಟಿತ ವಲಯದಲ್ಲಿದ್ದಾರೆ. ಸರ್ಕಾರಗಳು ಬಡತನ ನಿರ್ಮೂಲನೆ ಬಗ್ಗೆ ಮಾತನಾಡುತ್ತವೆ, ಆದರೆ ಈ ಶೇ. 94ರಷ್ಟು ಅಸಂಘಟಿತ ಕಾರ್ಮಿಕರ ಉದ್ಯೋಗ ಭದ್ರತೆ ಹಾಗೂ ಸೌಲತ್ತುಗಳನ್ನು ಗಮನಿಸದಿದ್ದರೆ ಬಡತನ ನಿರ್ಮೂಲನೆ ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಮೇ ತಿಂಗಳಿನಲ್ಲಿ ಕನಿಷ್ಠ ಮಾಸಿಕ ವೇತನವನ್ನು 31,000ಕ್ಕೆ ಹೆಚ್ಚಿಸಿ ಹೊರಡಿಸಿರುವ ಅಧಿಸೂಚನೆ ಶ್ಲಾಘನೀಯ. ಆದರೆ ಯಾವುದೇ ಬಂಡವಾಳಶಾಹಿಗಳ ಅಥವಾ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ನಿರ್ಧಾರವನ್ನು ಸರ್ಕಾರ ಹಿಂಪಡೆಯಬಾರದು. ಈ ವಿಚಾರದಲ್ಲಿ ಕರ್ನಾಟಕವನ್ನು ಇಡೀ ದೇಶಕ್ಕೆ ಮಾದರಿ ರಾಜ್ಯವನ್ನಾಗಿ ಮಾಡಬೇಕು ಎಂದರು.
ಬಿಎಂಎಸ್ ಕೇಂದ್ರ ಕಾಯಾರ್ಂಗ ಸಮಿತಿಯ ನಿರ್ದೇಶನದಂತೆ ದೇಶಾದ್ಯಂತ ಆಯೋಜಿಸಲಾದ ಈ ಹೋರಾಟದಲ್ಲಿ ಜಿಲ್ಲೆಯ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ಸಂಘಟನೆಯ ಮುಖಂಡರಾದ ಗೋಪಾಲಕೃಷ್ಣ, ರೋಹಿತಾಶ್ವ, ಜಯರಾಜ್ ಸಾಲಿಯಾನ್, ವಸಂತ್ ಕುಮಾರ್ ಮಣಿಹಳ್ಳ, ನಳಿನಿ ಅಡ್ಯಾರ್, ಉದಯ ಕುಮಾರ್ ಬಿ.ಸಿ., ಕುಮಾರನಾಥ ಶೆಟ್ಟಿ ಕಲ್ಮಂಜ, ಭಗವಾನ್ ದಾಸ್, ವಿಘ್ನೇಶ್, ಗೀತಾ ಧರ್ಮರಾಜ್, ತುಳಸಿ ದೇವರಾಜ್, ಡೀಲಾಕ್ಷಿ, ಪುರಂದರ ಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ಕಾರ್ಮಿಕರಿಗೆ ಮಾಸಿಕ ಕನಿಷ್ಠ 30ಸಾವಿರ ರೂ. ವೇತನ ನಿಗದಿ
ದೇಶಾದ್ಯಂತ ಎಲ್ಲ ರಂಗದ ಕಾರ್ಮಿಕರಿಗೆ ಮಾಸಿಕ ಕನಿಷ್ಠ ರೂ.30,000 ವೇತನ ನಿಗದಿಪಡಿಸಬೇಕು. ಇಎಸ್‌ಐ ಸೌಲಭ್ಯದ ಆದಾಯ ಮಿತಿಯನ್ನು ರೂ.21,000ರಿಂದ ರೂ.42,000ಕ್ಕೆ ಹಾಗೂ ಪಿಎಫ್ ಕಡಿತದ ವೇತನ ಮಿತಿಯನ್ನು ರೂ.15,000ದಿಂದ ರೂ.30,000ಕ್ಕೆ ಹೆಚ್ಚಿಸಬೇಕು. ಇಪಿಎಸ್-95 ಯೋಜನೆ ಅಡಿಯಲ್ಲಿ ನೀಡಲಾಗುವ ಕನಿಷ್ಠ ಪಿಂಚಣಿಯನ್ನು ರೂ.7,500ಕ್ಕೆ ಏರಿಸಿ, ಅದಕ್ಕೆ ತುಟ್ಟಿಭತ್ಯೆ ಸೇರಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರತಿಭಟನಾ ಸಮಾವೇಶದಲ್ಲಿ ಸಕಾರದ ಮುಂದಿಡಲಾಯಿತು.