ಕೇರಳ ರಾಜ್ಯೋದಯ ದಿನದಂದು ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಹಕ್ಕೊತ್ತಾಯ ದಿನಾಚರಣೆಯನ್ವಯ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಕೇರಳ ಮತ್ತು ಕರ್ನಾಟಕ ರಾಜ್ಯಗಳು ತನ್ನ 70ನೇ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ, ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಹಕ್ಕೊತ್ತಾಯದ ಜತೆಗೆ ಕರಾಳ ದಿನಾಚರಣೆಯತ್ತ ಕೇರಳ ಸರ್ಕಾರ ಒಯ್ಯುವಂತೆ ಮಾಡಿರುವುದು ದೌರ್ಭಾಗ್ಯ. ಬಹುಭಾಷಾ ಸಂಸ್ಕೃತಿ ಹೊಂದಿರುವ ಕಾಸರಗೋಡಿನಲ್ಲಿ, ಇಲ್ಲಿನ ಬಹುಭಾಷಿಗರನ್ನು ಬೆಸೆಯುವ ಕನ್ನಡ ಭಾಷೆಯನ್ನೇ ದಮನಿಸುವ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರೂ ಒಟ್ಟಾಗಿ ಧ್ವನಿಯೆತ್ತುವ ಕಾಲ ಸನ್ನಿಹಿತವಾಗಿದೆ ಎಂದು ಕನ್ನಡ ಹೋರಾಟಗಾರ ಮಲಾರ್ ಜಯರಾಮ ರೈ ಹೇಳಿದರು.
ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕದಿಂದ ಶನಿವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾದ ಗಡಿನಾಡು ಕನ್ನಡಿಗರ ಹಕ್ಕೊತ್ತಾಯ ದಿನಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರಣಿ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕೇರಳ ಗಡಿನಾಡ ಘಟಕದ ವಿಶಾಲಾಕ್ಷ ಪುತ್ರಕಳ ಮಾತನಾಡಿ, ಗಡಿನಾಡಿನಲ್ಲಿ ಕನ್ನಡವನ್ನು ದಮನಿಸುವ ಕೆಲಸ ಅಂಗನವಾಡಿಯಿಂದಲೇ ಆರಂಭಗೊಳ್ಳುತ್ತಿದ್ದು, ಮಲಯಾಳವನ್ನು ಕಡ್ಡಾಯವಾಗಿ ಹೇರುವ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಟಿ.ಶಂಕರನಾರಾಯಣ ಭಟ್, ಸತೀಸ್ ಕುಮಾರ್ ಕೂಡ್ಲು, ವಕೀಲ ಎಂ.ನಾರಾಯಣ ಭಟ್, ಕುಂಟಾರು ರವೀಶ ತಂತ್ರಿ, ಸತೀಶ್ ಅಡಪ ಸಂಕಬೈಲ್, ಲಕ್ಷ್ಮಣ ಪ್ರಭು ಕುಂಬಳೆ, ಎಂ.ಉಮೇಶ ಸಾಲ್ಯಾನ್, ಕೆ.ಭಾಸ್ಕರ, ಶಿವರಾಮ ಕಾಸರಗೋಡು, ವಕೀಲ ಕೆ.ಶ್ರೀಕಾಂತ್, ಅರಿಬೈಲ್ ಗೋಪಾಲ ಶೆಟ್ಟಿ, ಪ್ರೊ.ಎ.ಶ್ರೀನಾಥ್, ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ರವಿ ನಾಯ್ಕಾಪು, ಕನ್ನಡ ಅಧ್ಯಾಪಕರ ಸಂಘ ದ ಸುಕೇಶ್, ವಿ.ಬಿ.ಕುಳಮರ್ವ, ಡಾ.ವೆಂಕಟ್ರಮಣ ಹೊಳ್ಳ, ಬೇ.ಸಿ.ಗೋಪಾಲಕೃಷ್ಣ ಭಟ್, ಗಣಪತಿ ಭಟ್ ಬದಿಯಡ್ಕ, ಎಂ.ಸಂಜೀವ ಶೆಟ್ಟಿ, ಕಾಸರಗೋಡು ಚಿನ್ನಾ, ಕಾಸರಗೋಡು ಸರ್ಕಾರಿ ಕಾಲೇಜು ಸ್ನೇಹರಂಗದ ವಿವೇಕ್, ಜಯನಾರಾಯಣ ತಾಯನ್ನೂರ್, ಗಣೇಶ್‌ಪ್ರಸಾದ್ ಪಾಣೂರು, ಎನ್.ಕೆ.ಮೋಹನದಾಸ್, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಸವಿತಾ, ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ತಂತ್ರಿ, ಜಯಾನಂದ ಕುಮಾರ್ ಹೊಸದುರ್ಗ ಮೊದಲಾದವರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಪತ್ರಕರ್ತ ವೀಜಿ ಕಾಸರಗೋಡು ನಿರೂಪಿಸಿದರು. ಗುರುಪ್ರಸಾದ್ ಕೋಟೆಕಣಿ ವಂದಿಸಿದರು.
ಎಡಿಎಂಗೆ ಮನವಿ