ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ವಿಟ್ಲದಲ್ಲಿ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ ನಡೆಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು ಇತರರು ಇದ್ದರು. 
ದಕ್ಷಿಣ ಕನ್ನಡ

ಕೇಂದ್ರದ ಯೋಜನೆಗಳಿಗೆ ಕಾಂಗ್ರೆಸ್ ಅಡ್ಡಗಾಲು VITTAL

- ಸಂಸದ ಬ್ರಿಜೇಶ್ ಚೌಟ ಆರೋಪ | ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ

ವಿಟ್ಲ: ರಾಜ್ಯದಲ್ಲಿ ಕೇಂದ್ರದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿಲ್ಲ. ನಿರಂತರ ಸುಳ್ಳು ಹೇಳಿಕೊಂಡು ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಅಭಿವೃದ್ಧಿ ಕಾಮಗಾರಿ ಚಾಲನೆ ವೇಳೆ ಶಾಸಕರು ಕನಿಷ್ಠ ಪ್ರೊಟೋಕಾಲ್ ಪಾಲಿಸಿಲಿಲ್ಲ. ಮಾಣಿ-ಸಂಪಾಜೆ ರಸ್ತೆಯ ಡಿಪಿಆರ್ ನಡೆಯುತ್ತಿದೆ. ಪುತ್ತೂರು ಶಾಸಕರು ಪ್ರತಿ ಗ್ರಾಮಕ್ಕೆ ಹೋಗಿ ಅಭಿವೃದ್ಧಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನೀಡಿದ ಅನುದಾನಗಳ ಫ್ಲೆಕ್ಸ್ ಅಳವಡಿಸಬೇಕು. ೨೦೨೮ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದಾಗ ಜನರ ಜೀವನ ಬದಲಾವಣೆಯಾಗಲು ಸಾಧ್ಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ವಿಟ್ಲ ಹಳೇ ಬಸ್ ನಿಲ್ದಾಣದಲ್ಲಿ, ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ವತಿಯಿಂದ ನಡೆದ ಜನಾಂದೋಲನ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಗ್ಯಾರಂಟಿಯಿಂದ ಜನರಿಗೆ ಮೋಸ ಮಾಡಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸುವಂತಹ ಸ್ಥಿತಿಯನ್ನು ಕಾಂಗ್ರೆಸ್ ತಂದಿದೆ. ರಾಜ್ಯದಲ್ಲಿ ಮಂಗಳೂರು ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಸರ್ಕಾರ ಇದನ್ನು ಬೇಡ ಎನ್ನಲಿ ನೋಡೋಣ, ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಿಲ್ಲಬೇಕು ಎಂದರು.

ವಿಟ್ಲ ಅತಿಥಿಗೃಹದಿಂದ ಮೇಗಿನಪೇಟೆಯ ಪಶು ಆಸ್ಪತ್ರೆ ತನಕ ಪಾದಯಾತ್ರೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಆರ್.ಸಿ.ನಾರಾಯಣ, ರಾಧಾಕೃಷ್ಣ ಬುಡಿಯಾರ್, ದಯಾನಂದ ಶೆಟ್ಟಿ ಉಜಿರೆಮಾರ್, ಶಿವಕುಮಾರ್, ಕರುಣಾಕರ ನಾಯ್ತೊಟ್ಟು, ಸಂಗೀತ ಪಾಣೆಮಜಲು ಮತ್ತಿತರರು ಉಪಸ್ಥಿತರಿದ್ದರು.

ಉದಯ ಆಲಂಗಾರು ಸ್ವಾಗತಿಸಿದರು. ನರಸಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ವಿಟ್ಲ ವಂದಿಸಿದರು. ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ. ದೇವಸ್ಥಾನದ ಪುಷ್ಕರಣಿಗೆ ಮರು ಶಿಲಾನ್ಯಾಸ ಮಾಡುವ ಮೂಲಕ ಪುತ್ತೂರಿನ ಜನರಿಗೆ ಸಂದೇಶ ನೀಡಬೇಕು. ಶಾಸಕರ ಮಾತು ಕೇಳಿ ಕಾನೂನು ಮೀರಿ ಕೆಲಸ ಮಾಡಿದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಜೈಲಿಗಟ್ಟಲಾಗುವುದು. ಪುತ್ತೂರಿನ ಹಿಂದೂ ಸಮಾಜ ಕಾಂಗ್ರೆಸ್ ಸರ್ಕಾರದ ಬಗ್ಗೆ ಎಚ್ಚೆತ್ತುಕೊಂಡಿದೆ. ಪುತ್ತೂರಿನಲ್ಲಿ ದುರಹಂಕಾರಿ ಆಡಳಿತವನ್ನು ಕೊನೆಗಾಣಿಸಬೇಕು.
ಹರೀಶ್ ಪೂಂಜ, ಬೆಳ್ತಂಗಡಿ ಶಾಸಕ