ಕಡಬ: ಉಪ್ಪಿನಂಗಡಿ- ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯ ಕೆನರಾ ಬ್ಯಾಂಕ್ ಬಳಿ ಶುಕ್ರವಾರ ತಡರಾತ್ರಿ ಥಾರ್ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಆಲಂಕಾರು ಗ್ರಾಮದ ನಾಡ್ತಿಲ ಧರ್ಣಪ್ಪ ಗೌಡರ ಪುತ್ರ ಲೋಕೇಶ್ (42) ಮೃತರು. ಘಟನೆ ಬಳಿಕ ಸ್ಥಳದಿಂದ ಪರಾರಿಯಾದ ಕಾರು ಚಾಲಕ ನೆಕ್ಕರೆ ನಡುಗುಡ್ಡೆಯ ಮನೆಯೊಂದರ ಅಂಗಳದಲ್ಲಿ ಕಾರನ್ನು ನಿಲ್ಲಿಸಿ ತಲೆಮರೆಸಿಕೊಂಡಿದ್ದಾನೆ.
ಶುಕ್ರವಾರ ರಾತ್ರಿ 9.45ರ ವೇಳೆಗೆ ಲೋಕೇಶ್ ಬೈಕ್‌ನಲ್ಲಿ ಮನೆಗೆ ಹೋಗುವಾಗ ಕುಂತೂರು ಕಡೆಯಿಂದ ವೇಗವಾಗಿ ಬಂದ ಥಾರ್ ಕಾರು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಲೋಕೇಶ್ ಅವರನ್ನು ಸ್ಥಳೀಯರು ತಕ್ಷಣ ಉಪ್ಪಿಂಗಡಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೂ, ಜೀವ ಉಳಿಸಲಾಗಲಿಲ್ಲ.
ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಎಸ್.ಭೂಮಾ ರೆಡ್ಡಿ, ಡಿವೈಎಸ್‌ಪಿ ರೋಹಿಣಿ, ಸರ್ಕಲ್ ಇನ್‌ಸ್ಪೆೆಕ್ಟರ್ ನಾಗರಾಜ್, ಕಡಬ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಂಜಿತ್ ದೂರಿನಂತೆ ಪ್ರಕರಣ ದಾಖಲಾಗಿದೆ. ಪತ್ನಿ, ಪುತ್ರ, ಪುತ್ರಿ, ನಾಲ್ವರು ಸಹೋದರರನ್ನು ಅಗಲಿದ್ದಾರೆ.
ಅಪಘಾತ ಎಸಗಿ ಪರಾರಿಯಾಗಿದ್ದ ಕಾರು ಸ್ಥಳೀಯ ಹೋಟೆಲ್ ಉದ್ಯಮಿಯದು. ಆತನ ಸಹೋದರ ಕಾರನ್ನು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿತ್ತು. ಅಪಘಾತ ಎಸಗಿದ ಕಾರು ಉಪ್ಪಿನಂಗಡಿ ಕಡೆಗೆ ಪರಾರಿಯಾಗಿದೆ ಎಂಬ ವಿಚಾರ ತಿಳಿದು ಸಕ್ರಿಯರಾದ ಆಲಂಕಾರಿನ ಜನರು ಕಾರನ್ನು ಪತ್ತೆ ಹಚ್ಚಲು ಸುತ್ತಮುತ್ತಲಿನ ಊರಿನವರಿಗೆ ಕೂಡಲೇ ಮಾಹಿತಿ ರವಾನಿಸಿದರು. ಕಾರು 2 ಕಿ.ಮೀ. ವ್ಯಾಪ್ತಿಯಲ್ಲೇ ಇದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಜನರು ನಡುಗುಡ್ಡೆಯ ನಿವಾಸಿಯೊಬ್ಬರ ಮನೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದರು. ಕಾರು ನಡುಗುಡ್ಡೆ ಕಡೆಗೆ ಸಾಗಿರುವುದು ಖಚಿತವಾಗಿ ಹುಡುಕಾಡಿದಾಗ ಮನೆಯೊಂದರ ಅಂಗಳದಲ್ಲಿ ಅಪಘಾತ ಎಸಗಿದ್ದ ಕಾರು ಪತ್ತೆಯಾಗುತ್ತಿದ್ದಂತೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿ ಕಾರನ್ನು ವಶಪಡಿಸಿಕೊಂಡರು. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಡಿವೈಎಸ್‌ಪಿ ರೋಹಿಣಿ ತಿಳಿಸಿದರು.