Bhupa stabbed in the neck in anger for not letting him look at the phone 
ದಕ್ಷಿಣ ಕನ್ನಡ

ಫೋನ್ ನೋಡಲು ಕೊಡದ ಕೋಪ ಕುತ್ತಿಗೆಗೆ ಇರಿದ ಭೂಪ

ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆ ಬಳಿಯ ಬಸ್ಸು ತಂಗುದಾಣದಲ್ಲಿ ಕುಳಿತಿದ್ದ ವ್ಯಕ್ತಿಗೆ ಭಾನುವಾರ ರಾತ್ರಿ ಫೋನ್ ಕೇಳುವ ನೆಪದಲ್ಲಿ ಅಲ್ಲಿಗೆ ಬಂದ ಇನ್ನೊರ್ವ ವ್ಯಕ್ತಿ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ.

ಕಾಸರಗೋಡು ಜಿಲ್ಲೆಯ ನೆಕ್ರಾಜೆಯ ಸಿರಾಜು ಬಿ.ಎನ್. (35) ಗಾಯಗೊಂಡವರು. ಚೂರಿ ಇರಿಯಲು ಯತ್ನಿಸಿದ ಆರೋಪಿ ಇರ್ಷಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆಯ ವಿವರ

ಅ.11ರಂದು ಸಂಜೆ 6.30ರ ಸುಮಾರಿಗೆ ನಗರದ ಸಿಟಿ ಸೆಂಟರ್‌ಗೆ ಬಂದು ಅಡ್ಡಾಡಿದ ಸಿರಾಜು ರಾತ್ರಿ 10 ಗಂಟೆಯ ಸುಮಾರಿಗೆ ಲೇಡಿಗೋಶನ್ ಆಸ್ಪತ್ರೆ ಬಳಿಯ ಬಸ್ ಸ್ಟಾಪ್ ನಲ್ಲಿ ಕುಳಿತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಗೆ ಬಂದಿದ್ದಾನೆ. ಆತ ಮಲೆಯಾಳಿ ಭಾಷೆಯಲ್ಲಿ ನೀನು ಯಾಕೆ ಕುಳಿತಿರುವುದು, ಏನು ಮಾಡ್ತಾ ಇದ್ದೀಯ ಎಂದು ಕೇಳಿದ್ದಾನೆ. ಅದಕ್ಕೆ ಸಿರಾಜು ಮಲೆಯಾಳಿ ಭಾಷೆಯಲ್ಲೇ ಫೋನ್ ನೋಡುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. ಆಗ ಆತ ಫೋನ್ ಸ್ವಲ್ಪ ನೋಡಲು ಕೊಡು ಎಂದು ಕೇಳಿದ್ದಾನೆ. ಅದಕ್ಕೆ ಅವರು ಕೊಡುವುದಿಲ್ಲ ಎಂದಿದ್ದು, ಆತ ಜಗಳ ಮಾಡಿ ಫೋನ್ ನೋಡಲು ಕೊಡದೇ ಇದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಫೋನ್ ಕೊಡದೇ ಇದ್ದುದರಿಂದ ಸಿಟ್ಟಿನಲ್ಲಿ ಆತನ ಬಳಿಯಿದ್ದ ಚೂರಿಯಿಂದ ಸಿರಾಜು ಅವರ ಕುತ್ತಿಗೆಗೆ ಇರಿಯಲು ಯತ್ನಿಸಿದ್ದು, ಅವರು ತಪ್ಪಿಸಿಕೊಂಡರಾದರೂ ಎಡಬದಿಗೆ ತಾಗಿ ಮೂಗು ಹರಿದುಹೋಗಿದೆ. ಪುನಃ ಚೂರಿ ಹಾಕಲು ಬಂದಾಗ ಅವರ ಬಲಕೈಗೆ ತಾಗಿ ಗಾಯವಾಗಿದೆ. ಆಗ ಜನರು ಸೇರಿದ್ದು, ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕೊಲೆ ಮಾಡಲು ಯತ್ನಿಸಿದ ಇರ್ಷಾದ್ ಅಲೆಮಾರಿ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.