ಕೊಯ್ಯೂರಿನಲ್ಲಿ ಭಾನುವಾರ ಬೆಳ್ತಂಗಡಿ ತಾಲೂಕು 19ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು.
ಮನದ ಮಲೀನ ತೆಗೆಯುವ ಬಂಧುತ್ವ ನಿರ್ಮಿಸುವ ಸಾಹಿತ್ಯ ಬೇಕಿದೆ. ಕನ್ನಡ ಮಾತನಾಡುವುದು, ಬರೆಯುವುದನ್ನು ಹೆಚ್ಚಿಸುವ ಅಗತ್ಯವಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.
ಕೊಯ್ಯೂರಿನಲ್ಲಿ ಭಾನುವಾರ ಬೆಳ್ತಂಗಡಿ ತಾಲೂಕು 19ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.
ಕಸಾಪ ಬೆಳ್ತಂಗಡಿ ಘಟಕ ಅಧ್ಯಕ್ಷ ಯದುಪತಿ ಗೌಡ ಅಧ್ಯಕ್ಷತೆ ವಹಿಸಿ, ಸಾಹಿತ್ಯ ಒಂದು ವರ್ಗಕ್ಕೆ ಮೀಸಲಾಗದೆ ಸಮಾಜದ ಎಲ್ಲೆಡೆ ಪಸರಿಸಬೇಕು. ಸಾಹಿತ್ಯ ರಸಾನುಭವದ ಅಭಿವ್ಯಕ್ತಿಗೆ ಸಾಹಿತ್ಯ ಸಮ್ಮೇಳನಗಳು ಉತ್ತಮ ವೇದಿಕೆಯಾಗಿದ್ದು, ಇಲ್ಲಿ ಉತ್ತಮ ವಿಮರ್ಶೆ, ಚಿಂತನೆಗಳು ಮೂಡಿಬರುತ್ತವೆ ಎಂದರು.
ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಕನ್ನಡ ಶಾಲೆಗಳಿಂದ ಜೀವನ ಶಿಕ್ಷಣ ಸಿಗುತ್ತದೆ. ಸಾಹಿತ್ಯ ಸಮ್ಮೇಳನಗಳು ಭಾಷೆಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಸರ್ವಾಧ್ಯಕ್ಷ ಬಿ.ಭುಜಬಲಿ ಧರ್ಮಸ್ಥಳ ಮಾತನಾಡಿದರು. ನಿವೃತ್ತ ಶಿಕ್ಷಕ ಗಣೇಶ್ ಪಿ.ಕೊಕ್ಕಡ, ಉದ್ಯಮಿ ಕೆ.ಎಂ.ನಾಗೇಶ್ ಕುಮಾರ್ ಗೌಡ, ಕೊಯ್ಯೂರು ಪ್ಯಾಕ್ಸ್ ಅಧ್ಯಕ್ಷ ರವೀಂದ್ರನಾಥ ಗೌಡ, ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಕೆ., ಸಂಯೋಜನ ಸಮಿತಿ ಅಧ್ಯಕ್ಷ ಅಶೋಕ್ ಭಟ್ ಅಗ್ರಸಾಲೆ, ಕಾರ್ಯಾಧ್ಯಕ್ಷ ರಾಧಾಕೃಷ್ಣ ತಚ್ಚಮೆ, ಪ್ರಧಾನ ಸಂಚಾಲಕ ದಾಮೋದರ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಪಾಲಕರ ಕೋರಿಕೆಯಂತೆ ಇಂದು ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಉತ್ಪನ್ನವಾಗಿ ಮಾಡಲಾಗುತ್ತಿದೆ. ಲೋಕೋಪಯೋಗದ ದಾರಿಯಲ್ಲಿ ಶಿಕ್ಷಣ ಸಾಗುತ್ತಿದ್ದು, ಭಾವೋಪಯೋಗದ ಶಿಕ್ಷಣ ಸಾಗದೆ ಸಾಹಿತ್ಯ, ಸಂಸ್ಕೃತಿ ಸಂವೇದನೆ ಇಲ್ಲದೆ ಮಕ್ಕಳನ್ನು ಯಂತ್ರಗಳಂತೆ ಸೃಷ್ಟಿಸಲಾಗುತ್ತಿರುವುದು ವಿಷಾದನೀಯ. ಭಾಷೆಯನ್ನು ಭಾವಿಸುವ, ಜೀವಿಸುವ ಕುರಿತು ಯೋಚಿಸಬೇಕಿದೆ. ಅನುದಾನ ಕೊರತೆ ಇದ್ದರೂ ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ.
ಸಾಹಿತ್ಯ ಸಮ್ಮೇಳನಗಳಿಗೆ ಸಾಕಷ್ಟು ಅನುದಾನದ ಕೊರತೆ ಇದ್ದರೂ ಕೊಯ್ಯೂರಿನಲ್ಲಿ ಅತ್ಯುತ್ತಮ ಮಟ್ಟದಲ್ಲಿ ಕಾರ್ಯಕ್ರಮ ಮೂಡಿಬಂದಿರುವುದಕ್ಕೆ ಇಲ್ಲಿನ ಸಾಹಿತ್ಯ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲೂ ಸಾಹಿತ್ಯ ಸಮ್ಮೇಳನ ನಡೆಸಲು ಭಾಷಾ ಪ್ರೇಮಿಗಳ ಪ್ರೋತ್ಸಾಹ ಸಿಗುತ್ತಿರುವುದು ಶ್ಲಾಘನೀಯ.