ಅಳದಂಗಡಿಯ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ ಗಂಟೆ ಸಮರ್ಪಣೆಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ನೆರವೇರಿಸಿದರು. ಪ್ರಮುಖರಾದ ಡಾ.ಪದ್ಮಪ್ರಸಾದ ಅಜಿಲ, ಧರ್ಮಪಾಲ ದೇವಾಡಿಗ, ಮಲ್ಲಿಕಾ ಪಕ್ಕಳ ಮತ್ತಿತರರಿದ್ದರು. 
ದಕ್ಷಿಣ ಕನ್ನಡ

ಸನ್ಮಾರ್ಗದಲ್ಲಿ ನಡೆದಾಗ ದೇವರ ಅನುಗ್ರಹ : ವೀರಪ್ಪ ಮೊಯ್ಲಿ

ಸತ್ಯಗಳನ್ನು ಮರೆಯದೆ ಸನ್ಮಾರ್ಗದಲ್ಲಿ ನಡೆದಾಗ ದೇವರ ಆಶೀರ್ವಾದ ಸಿಗಲಿದ್ದು, ಆಗ ಮಾತ್ರ ನಮ್ಮಿಂದ ಧರ್ಮ ಕಾರ್ಯಗಳು ನಡೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.
ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ ದೋರಿಂಜೆ ಅಮಣಿ ಮಂಜು ದೇವಾಡಿಗ ಮತ್ತು ಮಕ್ಕಳ ಸೇವೆಯಾಗಿ ಶಿಲಾಮಯವಾಗಿ ನಿರ್ಮಾಣಗೊಂಡ ಗಂಟೆ ಗೋಪುರ ಸಮರ್ಪಣೆ ಬುಧವಾರ ನೆರವೇರಿಸಿ ಮಾತನಾಡಿದರು.
ಮುಂಬೈ ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಎಸ್.ಯೋಗೀಶ್‌ಕುಮಾರ್, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಭಾಗವಹಿಸಿದ್ದರು. ಗಂಟೆ ಗೋಪುರದ ಸೇವೆ ಸಮರ್ಪಿಸಿದ ಅಮಣಿ ಮಂಜು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಆಡಳಿತದಾರ ಶಿವಪ್ರಸಾದ ಅಜಿಲರು ಪ್ರಸ್ತಾವನೆಗೈದರು. ಅಮಣಿ ಮಂಜು ನಿವಾಸದಿಂದ ಭವ್ಯ ಮೆರವಣಿಗೆಗೆ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ.ಪುಷ್ಪಗಿರಿ ಚಾಲನೆ ನೀಡಿದರು. ಗೋಪುರ ಶಿಲ್ಪಿಗಳಾದ ವೇಲು ಸ್ವಾಮಿ ಹಾಗೂ ಗಣೇಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.

ದೇವಾಡಿಗ ಸಮಾಜಕ್ಕೂ ಅಳದಂಗಡಿ ಅರಮನೆಗೂ ಅವಿನಾಭಾವ ಸಂಬಂಧವಿದ್ದು, ನಮ್ಮ ಪ್ರತಿ ಕಾರ್ಯದಲ್ಲೂ ಅವರು ಕಣ್ಣುಗಳ ರೀತಿ ಜತೆ ಇದ್ದು, ಕೆಲಸ ಮಾಡುತ್ತಾ ಬಂದಿದ್ದಾರೆ. ಮಂಜು ದೇವಾಡಿಗ ಅವರು ಊರಿನ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ನಿರಂತರವಾಗಿ ದೊಡ್ಡಮಟ್ಟದ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಅವರು ತಮ್ಮ ಮಕ್ಕಳಿಗೂ ಅದೇ ಸಂಸ್ಕಾರ ನೀಡಿ ಬೆಳೆಸಿದ ಪರಿಣಾಮ ಇಂದು ಮಕ್ಕಳು ಕೂಡ ಭಕ್ತಿಯ ಸೇವೆ ಅರ್ಪಣೆ ಮಾಡಿದ್ದಾರೆ.