ಬಂಟ್ವಾಳ: ತ್ಯಾಜ್ಯ ವಿಲೇವಾರಿ, ನೀರಿನ ಸಮಸ್ಯೆ, ರಾಜ ಕಾಲುವೆ ಒತ್ತುವರಿ, ಜಮೀನು ಅತಿಕ್ರಮಣ, ಬ್ರೋಕರ್ ಹಾವಳಿ ಮೊದಲಾದ ಹಳೆಯ ಸಮಸ್ಯೆಗಳು ಹೊಸ ರೂಪ ಪಡೆದು ಬಂಟ್ವಾಳ ಪುರಸಭೆಯ ಹೊಸ ಅಧ್ಯಕ್ಷರ ಪ್ರಥಮ ಸಾಮಾನ್ಯ ಸಭೆಯಲ್ಲಿ ಚರ್ಚೆಗೀಡಾಯಿತು. ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಪುರಸಭೆಯ ಸಾಮಾನ್ಯ ಸಭೆ ಬುಧವಾರ ನಡೆಯಿತು.
ಅವೈಜ್ಞಾನಿಕ ಪೈಪ್‌ಲೈನ್, ಹೆದ್ದಾರಿ ಕಾಮಗಾರಿಯಿಂದಾಗಿ ಮೆಲ್ಕಾರ್, ಬಿ.ಸಿ.ರೋಡ್‌ನ ಕೆಲಭಾಗಗಳಲ್ಲಿ 10 ದಿನಗಳಿಂದ ಕುಡಿಯುವ ನೀರಿಲ್ಲದೆ ಜನರು ಪರಿತಪಿಸುತ್ತಿದ್ದಾರೆ ಎಂದು ಸದಸ್ಯ ಗೋವಿಂದ ಪ್ರಭು ಗಮನಸೆಳೆದರು. ಯೋಜನೆಯನ್ನು ಪುರಸಭೆಗೆ ಹಸ್ತಾಂತರಿಸುವ ಕುರಿತ ಪತ್ರ ಪುರಸಭೆಗೆ ಬಂದಿದ್ದರೂ, ಇಂತಹ ಗಂಭೀರ ವಿಚಾರ ಸಭೆಯ ಅಜೆಂಡಾದಲ್ಲಿರಿಸದ ಬಗ್ಗೆ ಅಧ್ಯಕ್ಷರು ಮತ್ತು ಇಂಜಿನಿಯರ್ ಅವರನ್ನು ಗೋವಿಂದ ಪ್ರಭು ತರಾಟೆಗೆ ತೆಗೆದುಕೊಂಡರು. ಪತ್ರ ಬಂದಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ ಎಂದು ಅಧ್ಯಕ್ಷ ವಾಸು ಪೂಜಾರಿ ಸಮಜಾಯಿಷಿ ನೀಡಿದರೆ, ಓರ್ವ ಸದಸ್ಯನಿಗೆ ಮಾಹಿತಿ ಸಿಕ್ಕಿರುವಾಗ ಅಧ್ಯಕ್ಷರಿಗೆ ಗೊತ್ತಿಲ್ಲ ಎನ್ನುವುದೇ ಆಶ್ಚರ್ಯ ಎಂದು ಪ್ರಭು ತಿರುಗೇಟು ನೀಡಿದರು.
ತ್ಯಾಜ್ಯ ನಿರ್ವಹಣೆಯಲ್ಲಿ ಪುರಸಭೆ ಹಿಂದೆ ಬಿದ್ದಿದ್ದು, ವಾರಗಳು ಕಳೆದರೂ ಕಸ ವಿಲೇವಾರಿ ಮಾಡುವ ವಾಹನ ಮನೆ ಬಾಗಿಲಿಗೆ ಬಂದಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ಸಮೀಪ ಕಸ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ರೋಗದ ಭೀತಿ ಎದುರಾಗಿದೆ. ಅಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ ಎಂದು ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ತಿಳಿಸಿದರು. ವಿಪಕ್ಷ ಸದಸ್ಯ ಹರಿಪ್ರಸಾದ್ ಪ್ರತಿಕ್ರಿಯಿಸಿ, ಕಸ ಎಸೆದು ಹೋಗುವವರಿಗೆ ತಮ್ಮ ಸಂಬಂಧಿ ಎಂದು ಪ್ರಭಾವ ಬೀರಿ ಬೆಂಬಲ ನೀಡಲಾಗುತ್ತದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಉಪಾಧ್ಯಕ್ಷ ಮೂನೀಷ್ ಆಲಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ವೇದಿಕೆಯಲ್ಲಿದ್ದರು. ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಸಿಬ್ಬಂದಿಗಳಾದ ರಜಾಕ್, ಉಮಾವತಿ ಮತ್ತಿತರರು ಉತ್ತರಿಸಿದರು.
ಸದಸ್ಯರಾದ ಶಶಿಕಲಾ, ವಿದ್ಯಾವತಿ, ದೇವಕಿ, ಲೋಲಾಕ್ಷ ಶೆಟ್ಟಿ, ಝೀನತ್ ಫಿರೋಜ್, ಮಹಮ್ಮದ್ ನಂದರಬೆಟ್ಟು, ಜಯರಾಮ ನಾಯ್ಕ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
ಆಡಳಿತಾಧಿಕಾರಿ ಇದ್ದ ಒಂದೂವರೆ ವರ್ಷ ಕಾಲದ ಗೌರವಧನ ಪಾವತಿಸಬೇಕು. ಇಲ್ಲದಿದ್ದಲ್ಲಿ ಈ ಸಾಮಾನ್ಯ ಸಭೆಯ ಗೌರವಧನ ಸ್ವೀಕರಿಸುವುದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟುಹಿಡಿದರು. ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ, ಹಸೈನಾರ್, ಸಿದ್ದೀಕ್ ಮತ್ತಿತರರು ವಿಷಯ ಪ್ರಸ್ತಾವಿಸಿ, ಬಂಟ್ವಾಳ ಹೊರತುಪಡಿಸಿ ಜಿಲ್ಲೆಯ ಇತರ ಪುರಸಭೆ, ನಗರಸಭೆಯಲ್ಲಿ ಸದಸ್ಯರಿಗೆ ಆಡಳಿತಾಧಿಕಾರಿಯಿದ್ದ ಕಾಲದ ಗೌರವಧನ ನೀಡಲಾಗಿದೆ. ಆದರೆ ಇಲ್ಲಿ ಯಾಕೆ ನೀಡಲಾಗುತ್ತಿಲ್ಲ? ಜಿಲ್ಲಾಧಿಕಾರಿ ಸೂಚನೆ ನೀಡಿದರೂ ಯಾಕೆ ತಡೆಹಿಡಿಯಲಾಗಿದೆ? ಎಂದು ಪ್ರಶ್ನಿಸಿದರು. ಸದಸ್ಯರ ಪಟ್ಟಿಗೆ ಮಣಿದ ಅಧ್ಯಕ್ಷ ವಾಸು ಪೂಜಾರಿ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ ವ್ಯವಸ್ಥೆ ಮಾಡುವಂತೆ ಸೂಚಿಸಿದ ಬಳಿಕ ಚರ್ಚೆಗೆ ತೆರೆ ಬಿತ್ತು.
ಕೈಕಂಬದಲ್ಲಿ ಬಸ್ ಶೆಲ್ಟರ್ ಸ್ಥಳಾಂತರ ಮಾಡಲು ಅಗೆದು ಹಾಕಿದ್ದಾರೆ. ಮಾಹಿತಿ ಪಡೆದು ವಾರ್ಡ್ ಸದಸ್ಯನ ನೆಲೆಯಲ್ಲಿ ಕಾಮಗಾರಿಯನ್ನು ನಿಲ್ಲಿಸಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಶೆಲ್ಟರ್ ಸ್ಥಳಾಂತರ ಮಾಡಲು ಪ್ರಯತ್ನಿಸಿದ ವ್ಯಕ್ತಿಗಳಿಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಸದಸ್ಯ ಮಹಮ್ಮದ್ ಶರೀಫ್ ಪ್ರಶ್ನಿಸಿದರು. ಸರಿಪಡಿಸಲು ಖಾಸಗಿ ಕಂಪನಿಯವರಿಗೆ ನೋಟಿಸ್ ನೀಡಿದ್ದೇನೆ ಎಂದು ಅಧ್ಯಕ್ಷರು ತಿಳಿಸಿದರು.
ಬಸ್ತಿಪಡ್ಪು ಎಂಬಲ್ಲಿ ರಾಜ ಕಾಲುವೆ ಅತಿಕ್ರಮಣ ಮಾಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅಕ್ರಮ ಕಟ್ಟಡಕ್ಕೆ ಯಾವ ಕಾನೂನಿನಡಿ ಡೋರ್ ನಂಬರ್ ನೀಡಲಾಗಿದೆ? ಎಂದು ಸದಸ್ಯರು ಪ್ರಶ್ನಿಸಿದರು. ಬಿ.ಸಿ.ರೋಡಿನ ಹೃದಯಭಾಗದಲ್ಲಿ ರಾಜಕಾಲುವೆಯನ್ನು ಅತಿಕ್ರಮಿಸಿ ಅನೇಕ ಕಟ್ಟಡಗಳು ನಿರ್ಮಾಣವಾಗಿದ್ದು, ಇದೇ ರೀತಿ ಮುಂದುವರಿದರೆ ಪುರಸಭಾ ವ್ಯಾಪ್ತಿ ನೆರೆಯಿಂದ ಮುಳುಗಡೆಯಾಗಬಹುದು ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಪೌರಕಾರ್ಮಿಕರಿಗೆ ರೈನ್‌ಕೋಟ್, ಗ್ಲೌಸ್, ಶೂ ಮಳೆ ಮುಗಿದ ಬಳಿಕ ಕೊಡುವುದೇ? ಎಂದು ಜನಾರ್ದನ ಚೆಂಡ್ತಿಮಾರ್ ಪ್ರಶ್ನಿಸಿದರು. ಪಾಣೆಮಂಗಳೂರಿನ ವಿಎ ಕಚೇರಿ ಹಳೇ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿ, ಮಳೆಗೆ ಬಿದ್ದರೆ ಜಾಗ ಅತಿಕ್ರಮಣ ಆಗುತ್ತದೆ ಎಂದು ಸದಸ್ಯ ಸಿದ್ದೀಕ್ ಗಮನ ಸೆಳೆದರು. ಬಿ.ಸಿ.ರೋಡ್‌ನ ಗಣೇಶ್ ಮೆಡಿಕಲ್ ಬಳಿ ಹಣ್ಣಿನ ವ್ಯಾಪಾರದ ಅಂಗಡಿ ಫುಟ್ ಪಾತನ್ನು ಆಕ್ರಮಿಸಿಕೊಂಡಿದ್ದು ತಕ್ಷಣ ತೆರವು ಮಾಡಬೇಕೆಂದು ಶರೀಫ್ ಆಗ್ರಹಿಸಿದರು. ಪಾಣೆಮಂಗಳೂರಿನಲ್ಲಿ ಮಟನ್ ಸ್ಟಾಲ್ ಮಾಡಿ ಒಂದು ವರ್ಷ ಆಯಿತು. ಇನ್ನೂ ಉದ್ಘಾಟನೆಯಾಗಿಲ್ಲ ಎಂದು ಇದ್ರೀಸ್ ಸಭೆಯ ಗಮನಕ್ಕೆ ತಂದರು.
ಇತ್ತೀಚೆಗೆ ವಿ.ಹಿಂ.ಪ ಮುಖಂಡ ಶರಣ್ ಪಂಪ್‌ವೆಲ್‌ಗೆ ಸವಾಲು ಹಾಕಿದ್ದ ನಿಕಟಪೂರ್ವ ಅಧ್ಯಕ್ಷ ಶರೀಫ್ ಹಾಗೂ ಸದಸ್ಯ ಹಸೈನಾರ್ ಸಭೆ ಆರಂಭಗೊಂಡು ಅರ್ಧಭಾಗ ಮುಗಿದ ಬಳಿಕ ಜತೆಯಾಗಿ ಹಾಜರಾಗಿ ಕಲಾಪದಲ್ಲಿ ಭಾಗವಹಿಸಿದರು. ಸಭೆಯ ಕೊನೇ ಗಳಿಗೆಯಲ್ಲಿ ಶರೀಫ್ ಮಾತನಾಡಿ, ನನ್ನ ಆಡಳಿತಾವಧಿಯಲ್ಲಿ ಅಧಿಕಾರಿಗಳು, ಕೆಲ ಸದಸ್ಯರು ಸ್ಪಂದಿಸದೆ ಸಾಕಷ್ಟು ತೊಂದರೆ ಅನುಭವಿಸಿದ್ದೆ. ಇದು ನನ್ನ ಮನಸ್ಸನ್ನು ಈಗಲೂ ಕಾಡುತ್ತಿದೆ ಎಂದರು.