ಬಂಟ್ವಾಳದಲ್ಲಿ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿಯಾಗಿರುವುದು  
ದಕ್ಷಿಣ ಕನ್ನಡ

ಬಂಟ್ವಾಳ, ಮೂಡುಬಿದಿರೆ ರಸ್ತೆಗಳು ಗುಂಡಿಮಯ

ಬಂಟ್ವಾಳ, ಮೂಡುಬಿದಿರೆ ರಸ್ತೆಗಳು ಗುಂಡಿಮಯ, ನಿತ್ಯ ಸಂಚಾರಕ್ಕೆ ತೊಡಕು

ಬಂಟ್ವಾಳ: ಬಂಟ್ವಾಳ ಪೇಟೆ ಹಾಗೂ ಮೂಡುಬಿದಿರೆ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನ ಸವಾರರು ಮತ್ತು ಸಾರ್ವಜನಿಕರು ನಿತ್ಯ ಸಂಚಾರದ ವೇಳೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಈಗಾಗಲೇ ಮಳೆ ನಿಂತಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾಡಬೇಕಾದವರ ನಿರ್ಲಕ್ಷ್ಯದಿಂದ ರಸ್ತೆಯ ಗುಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಲೊರೆಟ್ಟೊದಿಂದ ಬಂಟ್ವಾಳ ಪೇಟೆಗೆ ಆಗಮಿಸುವ ದಾರಿಯಲ್ಲಿ ಶಾಲೆ-ಕಾಲೇಜುಗಳಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿನ ರಸ್ತೆಯ ಆಯಕಟ್ಟಿನ ಜಾಗದಲ್ಲೇ ಬೃಹತ್ ಗುಂಡಿಗಳು ಸೃಷ್ಟಿಯಾಗಿವೆ. ಗುಂಡಿ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವ ಆತಂಕ ಎದುರಾಗಿದೆ.

ಬಂಟ್ವಾಳ ಪೇಟೆಯ ಕೊಟ್ರಮಣಗಂಡಿ ಬಸ್ ನಿಲ್ದಾಣದ ಬಳಿ ಕಾಂಕ್ರೀಟ್ ಹಾಗೂ ಡಾಂಬರು ರಸ್ತೆಯ ಮಧ್ಯೆ ಬೃಹತ್ ಗುಂಡಿ ನಿರ್ವಾಣವಾಗಿದ್ದು, ಈಗಾಗಲೇ ಹತ್ತಾರು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜನರು ಆಗ್ರಹಿಸಿದ್ದಾರೆ.