ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 
ದಕ್ಷಿಣ ಕನ್ನಡ

11ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ

ಮಂಗಳೂರು : ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಗೊಳ್ಳುವ ದಿಸೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗವು ಆ.11ರಿಂದ 22ರವರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ನಡೆಸಲು ಸಿದ್ಧತೆ ನಡೆಸಿದೆ. ಈ ಪರೀಕ್ಷೆ ಯಶಸ್ವಿಯಾದರೆ ಶೀಘ್ರದಲ್ಲೇ ವಾಣಿಜ್ಯ ಸಂಚಾರಕ್ಕೆ ಅನುಮೋದನೆ ಸಿಗುವ ನಿರೀಕ್ಷೆಯಿದೆ.

ರೈಲ್ವೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (್ಕಈಖ) ತಜ್ಞರ ತಂಡ ಈ ಪರೀಕ್ಷಾ ಸಂಚಾರವನ್ನು ಮೇಲ್ವಿಚಾರಣೆ ಮಾಡಲಿದೆ. ವಿಶೇಷವಾಗಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಅಉಆ) ವ್ಯವಸ್ಥೆ ಹೊಂದಿರುವ 20 ಬೋಗಿಗಳ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಸುರಕ್ಷಿತವಾಗಿ ಸಂಚರಿಸಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಎಇಬಿ ಯಾಕೆ ಅಗತ್ಯ?
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗವು 1:50 ತೀವ್ರ ಇಳಿಜಾರು ಹೊಂದಿರುವ ಅತ್ಯಂತ ಸವಾಲಿನ ಮಾರ್ಗವಾಗಿದೆ. ಈ ಕಾರಣದಿಂದ ಇಲ್ಲಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀ. ಗೆ ಮಿತಿಗೊಳಿಸಲಾಗಿದೆ. ಸಾಮಾನ್ಯ ರೈಲುಗಳಿಗೆ ಈ ವಿಭಾಗದಲ್ಲಿ ಹೆಚ್ಚುವರಿ ಬ್ಯಾಂಕರ್ ಲೋಕೋಮೋಟಿವ್ ಜೋಡಿಸಲಾಗುತ್ತದೆ. ಆದರೆ ವಂದೇ ಭಾರತ್ ರೈಲಿಗೆ ಅದನ್ನು ಜೋಡಿಸಲು ಮುಂಭಾಗದ ಏರೋಡೈನಾಮಿಕ್ ನೋಸ್ ತೆಗೆದು ಹಾಕಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುವುದಲ್ಲದೆ ವೇಗದ ರೈಲಿನ ಉದ್ದೇಶಕ್ಕೂ ಧಕ್ಕೆ ಉಂಟಾಗುತ್ತದೆ. ಎಇಬಿ ವ್ಯವಸ್ಥೆ ಹೊಂದಿರುವ ವಂದೇ ಭಾರತ್ ರೈಲು ಈ ಸಮಸ್ಯೆಯನ್ನು ನಿವಾರಿಸುವುದರಿಂದ ಪ್ರತ್ಯೇಕ ಬ್ಯಾಂಕರ್ ಎಂಜಿನ್ ಅಗತ್ಯವಿರುವುದಿಲ್ಲ.
ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಅಗತ್ಯ ಸುರಕ್ಷತಾ ಅನುಮೋದನೆ ದೊರೆತರೆ, ಬೆಂಗಳೂರು ಮತ್ತು ಮಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ. ಇದರಿಂದ ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನ ನಡುವಿನ ಪ್ರಯಾಣದ ಸಮಯ ಕಡಿಮೆಯಾಗುವ ಜೊತೆಗೆ ಆಧುನಿಕ ಸೌಲಭ್ಯಗಳೊಂದಿಗೆ ವೇಗದ ರೈಲು ಸೇವೆ ದೊರೆಯಲಿದೆ.