ಡಾ.ಕೆ.ಶಿವರಾಮ ಕಾರಂತರ ೧೨೫ನೇ ಜನ್ಮದಿನಾಚರಣೆ ಪೂರ್ವಭಾವಿ ಸಭೆ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸುದಾನ ಶಾಲೆ ಸಂಚಾಲಕ ವಿಜಯ ಹಾರ್ವಿನ್, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಉಪಸ್ಥಿತರಿದ್ದರು.  
ದಕ್ಷಿಣ ಕನ್ನಡ

ವರ್ಷದೊಳಗೆ ಬಾಲವನ ಅಭಿವೃದ್ಧಿ ಕಾಮಗಾರಿ ಪೂರ್ಣ BALAVANA

ಸ್ಟೆಲ್ಲಾ ವರ್ಗೀಸ್ ಮಾಹಿತಿ | ಕಾರಂತ ಜನ್ಮದಿನಾಚರಣೆ ಪೂರ್ವಭಾವಿ ಸಭೆ

ಪುತ್ತೂರು: ಬಾಲವನದಲ್ಲಿ ಶಾಸಕರ ಮಾರ್ಗದರ್ಶನದಂತೆ ಈಗ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಂದಿರುವ ಅನುದಾನಕ್ಕೆ ಪೂರಕವಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡು ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಒಂದು ವರ್ಷದೊಳಗೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.

ಡಾ.ಕೆ.ಶಿವರಾಮ ಕಾರಂತ ೧೨೫ನೇ ಜನ್ಮದಿನಾಚರಣೆ ಅಂಗವಾಗಿ ನಡೆಯುವ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಕಾರಂತರ ೧೨೫ನೇ ಜನ್ಮದಿನಾಚರಣೆ ಅಂಗವಾಗಿ ಪುತ್ತೂರಿನಲ್ಲಿ ಡಾ.ಶಿವರಾಮ ಕಾರಂತರ ಪ್ರತಿಮೆ ಸ್ಥಾಪಿಸಬೇಕು. ವೃತ್ತವೊಂದಕ್ಕೆ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತ ವೃತ್ತ’ ಎಂದು ನಾಮಕರಣ ಮಾಡಬೇಕು. ಬಾಲವನ ಅಭಿವೃದ್ಧಿ ಸಮಿತಿಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನ್ನು ಪದನಿಮಿತ್ತ ಸದಸ್ಯರನ್ನಾಗಿ ಸೇರ್ಪಡೆಗೊಳಿಸಬೇಕು ಎಂದರು.

ಆಯ್ಕೆ ಸಮಿತಿ ರಚನೆ: ಶಿವರಾಮ ಕಾರಂತ ಪ್ರಶಸ್ತಿಯನ್ನು ಈ ಬಾರಿ ಪರಿಸರ ಕ್ಷೇತ್ರದ ಸಾಧಕರಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಸದಸ್ಯ ಕಾರ್ಯದರ್ಶಿಯಾಗಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಗೌರವ ಸದಸ್ಯರಾಗಿ ನಿವೃತ್ತ ಪ್ರಾಧ್ಯಾಪಕ ವಿ.ಬಿ.ಅರ್ತಿಕಜೆ, ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಿಜಯ ಹಾರ್ವಿನ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.

ಸುದಾನ ಶಾಲೆ ಸಂಚಾಲಕ ವಿಜಯ ಹಾರ್ವಿನ್, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಉಪಸ್ಥಿತರಿದ್ದರು. ರಮೇಶ್ ಉಳಯ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ಅರಿಯಡ್ಕ ಸಹಕರಿದರು.

ಸಭೆಗೆ ಹಾಜರಾಗದವರು ಸಮಿತಿಯಲ್ಲಿ ಯಾಕೆ?

ಸರ್ಕಾರ ನೇಮಕ ಮಾಡಿದ ಬಾಲವನ ಸಮಿತಿಯ ಬಗ್ಗೆ ಮಾಹಿತಿ ನೀಡಲು ಅಽಕಾರಿಗಳು ಮುಂದಾದಾಗ ಸಭೆಗೆ ಸದಸ್ಯರೊಬ್ಬರು ಹಾಜರಾಗಿಲ್ಲ. ಸಭೆಗೆ ಬಾರದವರು ಸಮಿತಿಯಲ್ಲಿ ಯಾಕೆ? ಈ ಸಭೆಗೇ ಬಾರದವರು ಮುಂದೆ ಬರುತ್ತಾರಾ? ನಾವು ಇಷ್ಟು ದೂರ ಬಂದು ಇಷ್ಟು ಹೊತ್ತು ಇಲ್ಲಿ ಕುಳಿತು ಕಾಯುವುದು ಯಾಕೆ? ಎಂದು ಪ್ರಶ್ನಿಸಿದ ನಿವೃತ್ತ ಪ್ರಾಧ್ಯಾಪಕ ವಿ.ಬಿ.ಅರ್ತಿಕಜೆ, ಸಭೆಯಿಂದ ತೆರಳಲು ಮುಂದಾದರು. ಬಳಿಕ ಸಮಾಧಾನ ಪಡಿಸಿ ಸಭೆ ಮುಂದುವರಿಸಲಾಯಿತು.