ಬಳಕ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ರೈಲ್ವೇ ಇಲಾಖೆ ತಡೆಬೇಲಿ ಹಾಕಿರುವುದು. 
ದಕ್ಷಿಣ ಕನ್ನಡ

ಬಳಕಕ್ಕೆ ಕಿರುರಸ್ತೆಯೇ ಶಾಪ! : ಸಂಚರಿಸಲು ಅಸಾಧ್ಯವೆನ್ನುವಷ್ಟು ಸಣ್ಣ ಮಾರ್ಗ

ಪ್ರಮುಖ ಮುಖ್ಯಾಂಶಗಳು

  • ತುರ್ತು ಸಂದರ್ಭದಲ್ಲಿ ಕೈಚೆಲ್ಲುವ ಅನಿವಾರ್ಯತೆ
  • 60ಕ್ಕೂ ಅಧಿಕ ಕುಟುಂಗಳು ವಾಸವಿರುವ ಊರು
  • ಊರಿನವರಿಂದ ಭಾರಿ ಹೋರಾಟದ ತಯಾರಿ
ಬಿ.ಮೂಡ ಗ್ರಾಮದಲ್ಲಿರುವ ಬಳಕ ಊರಿಗೆ ನಗರ, ಆಸ್ಪತ್ರೆ, ಅಗ್ನಿಶಾಮಕ ದಳ ಸಹಿತ ಸಕಲ ವ್ಯವಸ್ಥೆಗಳು ಕೂಗಳತೆ ದೂರದಲ್ಲೇ ಇದ್ದರೂ ಪ್ರಯೋಜನ ಮಾತ್ರ ಶೂನ್ಯ. ತುರ್ತು ಸಂದರ್ಭ ಎದುರಾದಾಗ ಗ್ರಾಮಸ್ಥರು ಕೈಚೆಲ್ಲಿ ಕುಳಿತುಕೊಳ್ಳುವುದು ಸರ್ವೇ ಸಾಮಾನ್ಯವಾಗಿದ್ದು, ಕಾರಣ ವಾಹನ ಸಂಚರಿಸಲು ಅಸಾಧ್ಯವಾದ ರಸ್ತೆ.
ಬಿ.ಸಿ.ರೋಡಿನಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿರುವ ಬಳಕ ಗ್ರಾಮಕ್ಕೆ ಇರುವ ಮೂರು ರಸ್ತೆಗಳಲ್ಲೂ ಭಾರಿ ವಾಹಗಳು, ಟೆಂಪೊಗಳು ಅಥವಾ ಆಂಬುಲೆನ್ಸ್‌ಗಳು ಸಂಚರಿಸುವುದೇ ಅಸಾಧ್ಯ. ಬಿ.ಸಿ.ರೋಡು ರೈಲ್ವೆ ನಿಲ್ದಾಣವಾಗಿ ಕೈಕುಂಜೆ ಸ್ಮಶಾನ ಬಳಿಯಿಂದ ಮಣ್ಣಿನ ರಸ್ತೆ ಇದ್ದು, ಗೂಡಿನ ಬಳಿಯಿಂದ ಕಾಂಕ್ರೀಟ್ ರಸ್ತೆಯಿದೆ. ಹೆಚ್ಚು ಬಳಕೆಯಲ್ಲಿರುವ ಕೈಕುಂಜೆ ಮಣ್ಣು ರಸ್ತೆಯಲ್ಲಿ ಏಕಕಾಲಕ್ಕೆ ದ್ವಿಮುಖವಾಗಿ ವಾಹನ ಸಂಚಾರವೇ ಅಸಾಧ್ಯ.

ರೈಲ್ವೆ ಇಲಾಖೆ ಅಡ್ಡಿ

ಬಳಕ ಊರಿನಲ್ಲಿ 60ಕ್ಕೂ ಅಧಿಕ ಮನೆಗಳಿದ್ದು, ಜತೆಗೆ ಬಿ.ಮೂಡ ವ್ಯಾಪ್ತಿಗೆ ಸಂಬಂಧಿಸಿದ ಸುಸಜ್ಜಿತ ಹಿಂದೂ ರುದ್ರಭೂಮಿಯೂ ಇದೇ ಪ್ರದೇಶದಲ್ಲಿದೆ. ಮಳೆಗಾಲ ಸಂದರ್ಭ ಮಣ್ಣಿನ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದ್ದು, ಈ ಕಾರಣಕ್ಕಾಗಿ ಸೂಕ್ತ ರಸ್ತೆ ವ್ಯವಸ್ತೆ ಅಗತ್ಯವಿದ್ದು, ಈ ಕುರಿತು ಪಕ್ಷ ತಾರತಮ್ಯವಿಲ್ಲದೇ ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆ ಸಮಸ್ಯೆ ಸಹಿತ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು ಎಂದು ಬಳಕ ಜನರು ಒತ್ತಾಯಿಸಿದ್ದಾರೆ.

ತೀವ್ರ ಅಸಮಾಧಾನ

ಇಲ್ಲಿರುವ ರಸ್ತೆ ಸರಿಪಡಿಸಿದರೆ ಅದು ರೈಲ್ವೆ ಇಲಾಖೆಗೂ ಉಪಯೋಗ, ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಮನೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುವ ಸಂದರ್ಭದಲ್ಲೂ ವಾಹನಗಳು ಹೋಗಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿದೆ.

ಈ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಈ ಭಾಗಕ್ಕೆ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ರೈಲ್ವೆ ಇಲಾಖೆ ಕಬ್ಬಿಣದ ಕಮಾನುಗಳನ್ನು ಅಳವಡಿಸಿದೆ. ಇದರಿಂದಾಗಿ ಮನೆ ಹೊತ್ತಿ ಉರಿಯುತ್ತಿದ್ದಾಗಲೂ ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್‌ಗಳು ಬರಲು ಸಾಧ್ಯವಾಗಿಲ್ಲ.