ಏ.18-19ರಂದು ಮಂಗಳೂರಿನಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಸಮಾವೇಶ
ಮಂಗಳೂರು: ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಇದರ ವತಿಯಿಂದ ಏ.18 ಮತ್ತು 19ರಂದು ಮಂಗಳೂರಿನ ಮಣ್ಣಗುಡ್ಡೆಯ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಸಮಾವೇಶ ಆಯೋಜಿಸಲಾಗಿದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ್ ಪ್ರಭಂಜನ್ ಸೂರ್ಯ ತಿಳಿಸಿದ್ದಾರೆ.
ವಿಶ್ವಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.18ರಂದು ಬೆಳಗ್ಗೆ 9 ಗಂಟೆಗೆ ಸಮಾವೇಶಕ್ಕೆ ಚಾಲನೆ ದೊರೆಯಲಿದೆ. ಬಜರಂಗದಳದ ಕಾರ್ಯವನ್ನು ಇನ್ನಷ್ಟು ಬಲಗೊಳಿಸುವುದರ ಜೊತೆಗೆ ಗ್ರಾಮ ಮಟ್ಟಕ್ಕೆ ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ವಿಹಿಂಪ ಕೇಂದ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣು ಮಾಲಯನ್, ಬಜರಂಗದಳ ರಾಷ್ಟ್ರೀಯ ಸಂಯೋಜಕ್ ಕಿಶನ್ ಪ್ರಜಾಪತ್, ಕ್ಷೇತ್ರೀಯ ಸಂಯೋಜಕ್ ಕುಮಾರಸ್ವಾಮಿ, ಕೇಂದ್ರೀಯ ಉಪಾಧ್ಯಕ್ಷ ಮೋಹನ್ ಮಂಗ್ಹಾನೀ, ಪ್ರಾಂತ ಅಧ್ಯಕ್ಷ ದೀಪಕ್ ರಾಜಗೋಪಾಲ್, ಪ್ರಾಂತ ಕಾರ್ಯದರ್ಶಿ ಸುರೇಶ್ ಬಿ ಈ., ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮುಂತಾದವರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಯುವ ವಿಭಾಗವಾದ ಬಜರಂಗದಳ ಕಳೆದ ನಾಲ್ಕು ದಶಕಗಳಿಂದ ದೇಶಾದ್ಯಂತ ಹಿಂದೂ ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಮತ್ತು ಸೇವಾಮನೋಭಾವನೆಯನ್ನು ಮೂಡಿಸುವುದರ ಮೂಲಕ ಸೇವಾ-ಸುರಕ್ಷಾ-ಸಂಸ್ಕಾರ ಎಂಬ ಧ್ಯೇಯ ವಾಕ್ಯದೊಂದಿಗೆ ಹಿಂದೂ ಯುವಕರನ್ನು ಸಂಘಟಿಸುವಲ್ಲಿ ತೊಡಗಿಕೊಂಡಿದೆ. ನಿರಂತರವಾಗಿ ಹಿಂದೂ ಧರ್ಮದ ರಕ್ಷಣೆಯ ಜೊತೆಗೆ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ. ಸಮಾವೇಶದ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರಭಂಜನ್ ಸೂರ್ಯ ತಿಳಿಸಿದರು.
ಬಜರಂಗದಳ ಪ್ರಾಂತ ಸಂಯೋಜಕ ಭುಜಂಗ ಕುಲಾಲ್, ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ಪ್ರೀತಂ ಕಾಟಿಪಳ್ಳ ಉಪಸ್ಥಿತರಿದ್ದರು.
ಐದು ವಿಷಯಗಳ ಚರ್ಚೆ
ಸಮಾವೇಶದಲ್ಲಿ ಪ್ರಮುಖ ಐದು ವಿಷಯಗಳ ಕುರಿತಂತೆ ಸಮಗ್ರ ಚರ್ಚೆ ನಡೆಯಲಿದೆ. ರಾಜ್ಯವ್ಯಾಪಿ ಬಜರಂಗದಳಕ್ಕೆ ಹೊಸ ಕಾರ್ಯಕರ್ತರ ಜೋಡಣೆ ಮತ್ತು ಸಂಘಟನಾ ವಿಸ್ತಾರ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ, ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಿರ್ಮಾಣ, ಗೋ ರಕ್ಷಣೆ, ಹಿಂದೂ ಯುವಕರಿಗೆ ತರಬೇತಿ ನೀಡುವ ಮೂಲಕ ಸ್ವ ಉದ್ಯೋಗ ಕಲ್ಪಿಸುವುದು ಇತ್ಯಾದಿ ವಿಷಯಗಳ ಕುರಿತಂತೆ ಚರ್ಚೆಗಳು ನಡೆಯಲಿವೆ ಎಂದವರು ತಿಳಿಸಿದರು.