ವಿಜಯವಾಣಿ ಸುದ್ದಿಜಾಲ ಗುರುಪುರ
ಐದಾರು ವರ್ಷಗಳ ಹಿಂದೆ ನೋಡಿದ್ದ ಬಜ್ಪೆ ಜಂಕ್ಷನ್ ಇಂದು ಅತ್ಯಾಧುನಿಕವಾಗಿ ಕಂಗೊಳಿಸುತ್ತಿದೆ. ಬಸ್-ಪ್ರಯಾಣಿಕರ ತಂಗುದಾಣ, ಸುಸಜ್ಜಿತ ಪಾಕಿರ್ಂಗ್ ವ್ಯವಸ್ಥೆ, ಒಳಚರಂಡಿ, ನೂತನ ಮಾರುಕಟ್ಟೆ ಹಾಗೂ ರಸ್ತೆ ಕಾಂಕ್ರೀಟೀಕರಣದ ಮೂಲಕ ಪಟ್ಟಣ ಮೇಲ್ದರ್ಜೆಗೇರಿದೆ. ಆದರೆ, ಜಂಕ್ಷನ್‌ಗೆ ಅನತಿ ದೂರದಲ್ಲೇ ಇರುವ ಬಜ್ಪೆ ಚರ್ಚ್ ಎದುರಿನ ರಾಜ್ಯ ಹೆದ್ದಾರಿಯ ಕಿರು ಅಂತರವೊಂದು ಸಂಪೂರ್ಣ ಹಾಳಾಗಿದ್ದು, ಸುಂದರ ಪಟ್ಟಣಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಆಳವಾದ ಹೊಂಡ-ಗುಂಡಿಗಳಿಂದಾಗಿ ಇದು ಅಪಾಯಕಾರಿ ಅಪಘಾತ ವಲಯವಾಗಿ ಬದಲಾಗಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚರ್ಚ್ ಎದುರಿನ ಸಣ್ಣ ಸರ್ಕಲ್ ದಾಟಿ ಜಂಕ್ಷನ್ ಪ್ರವೇಶಿಸುವಾಗ ವಾಹನ ಸವಾರರಿಗೆ ನರಕದರ್ಶನವಾಗುತ್ತದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಅವುಗಳ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ಪಲ್ಟಿಯಾಗಿ ಗಾಯಗೊಳ್ಳುವುದು ಇಲ್ಲಿ ನಿತ್ಯದ ಗೋಳು. ವಿಶೇಷವೆಂದರೆ, ಈ ಹೊಂಡದ ಎರಡೂ ಬದಿಗಳಲ್ಲಿ ಕಾಂಕ್ರೀಟ್ ರಸ್ತೆಯಿದೆ. ವಾಹನ ಸವಾರರಿಗೆ ತೊಂದರೆ ನೀಡಲೆಂದೇ ಈ ಜಾಗದಲ್ಲಿ ಹಂಪ್ಸ್ ರೂಪದಲ್ಲಿ ಹೊಂಡವನ್ನು ಮುಚ್ಚದೆ ಬಿಟ್ಟಿರಬೇಕು ಎಂದು ಸ್ಥಳೀಯ ವ್ಯಾಪಾರಿಗಳು ಆಡಳಿತ ವ್ಯವಸ್ಥೆಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಜ್ಪೆಯಿಂದ ಗುರುಪುರ ಕೈಕಂಬ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಳೆದ ಒಂದು ವರ್ಷದಿಂದ ಡಾಂಬರು ಕಾಣದೆ ತೀರಾ ದುಸ್ಥಿತಿಯಲ್ಲಿದೆ. ಬಜ್ಪೆ ಸರ್ಕಲ್, ಹಳೇ ಪೊಲೀಸ್ ಠಾಣೆ ಮುಂಭಾಗ ಹಾಗೂ ಕಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಕಿತ್ತುಹೋಗಿ ತೋಡಿನಂತಾಗಿದೆ. ಮಳೆ ನೀರು ಹರಿದು ಡಾಂಬರು ಕೊಚ್ಚಿಹೋಗಿದ್ದು, ಎಲ್ಲೆಡೆ ಹರಡಿಕೊಂಡಿರುವ ಜಲ್ಲಿಕಲ್ಲುಗಳು ವಾಹನ ಸಂಚಾರಕ್ಕೆ ಕಂಟಕವಾಗಿವೆ. ಸಾರ್ವಜನಿಕರು ಪದೇಪದೆ ಆಗ್ರಹಿಸಿದ್ದರೂ ಪಿಡಬ್ಲ್ಯೂಡಿ ಇಲಾಖೆ ಕನಿಷ್ಠ ತೇಪೆ ಹಚ್ಚುವ ಕೆಲಸಕ್ಕೂ ಮುಂದಾಗಿರಲಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆ ಬಿಡುವು ನೀಡಿರುವುದರಿಂದ ಬಜ್ಪೆ ಚರ್ಚ್ ಸಮೀಪದ ಹೊಂಡಗಳ ದುರಸ್ತಿ ಹಾಗೂ ಗುರುಪುರ ಕೈಕಂಬದವರೆಗಿನ ರಾಜ್ಯ ಹೆದ್ದಾರಿಗೆ 15 ಲಕ್ಷ ರೂ. ನಿರ್ವಹಣಾ ವೆಚ್ಚದಲ್ಲಿ ತಕ್ಷಣವೇ ಪ್ಯಾಚ್ ವರ್ಕ್ ಕೈಗೆತ್ತಿಕೊಳ್ಳಲಾಗುವುದು. ಚರ್ಚ್ ಬಳಿಯ ರಸ್ತೆ ಮತ್ತು ಚರಂಡಿ ಎರಡನ್ನೂ ಸರಿಪಡಿಸಲಾಗುವುದು. ಜತೆಗೆ ಬಜ್ಪೆಯಿಂದ ಮರವೂರು ಕಡೆಗೆ 10 ಕೋಟಿ ರೂ. ವೆಚ್ಚದಲ್ಲಿ ಹಂತಹಂತವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ.ಪ್ರವೀಣ್ ಪ್ರೀತಂ, ಎಇಇ, ಪಿಡಬ್ಲ್ಯುಡಿ ಮಂಗಳೂರು ಉಪವಿಭಾಗ
ಬಜ್ಪೆ ಚರ್ಚ್ ಬಳಿ ಹಾಗೂ ಹಳೇ ಪೊಲೀಸ್ ಠಾಣೆ ಮುಂಭಾಗದ ರಸ್ತೆ ಹೊಂಡಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಬಜ್ಪೆ ಪಟ್ಟಣ ಪಂಚಾಯಿತಿ ಈಗಾಗಲೇ ಗಂಭೀರವಾಗಿ ಪರಿಗಣಿಸಿ ಪಿಡಬ್ಲ್ಯುಡಿ ಗಮನಕ್ಕೆ ತಂದಿದೆ. ಪಪಂ ವ್ಯಾಪ್ತಿಯಲ್ಲಿ ರಸ್ತೆ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗಿದ್ದು, ಮರವೂರುವರೆಗೆ 10 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆಯಿಂದ ಶೀಘ್ರವೇ ಕಾಮಗಾರಿ ಆರಂಭವಾಗುವ ಭರವಸೆ ಸಿಕ್ಕಿದೆ.ಲೋಕೇಶ್ ಪೂಜಾರಿ, ಬಜ್ಪೆ ಪಟ್ಟಣ ಪಂಚಾಯಿತಿ ಅಧ್ಯಕ್ಷ