ಮೂಡುಬಿದಿರೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ ಮೇಬಲ್ ಸಿಂತಿಯಾ ಮೆಂಡೋನ್ಸಾ ಅವರನ್ನು ಸನ್ಮಾನಿಸಲಾಯಿತು.  
ದಕ್ಷಿಣ ಕನ್ನಡ

ಶಾಲಾಭಿವೃದ್ಧಿಗೆ ವಿದ್ಯಾಭಿಮಾನಿಗಳ ಸಹಕಾರ : ಕೆ.ಅಭಯಚಂದ್ರ ಜೈನ್ ಹೇಳಿಕೆ

ಮೂಡುಬಿದಿರೆ: ಐವತ್ತೆಂಟು ವರ್ಷಗಳ ಹಿಂದೆ ಅಂಕಗಳ ಮುಖ ನೋಡದೆ, ವಿಶೇಷವಾಗಿ ಬಡವರ ಶಿಕ್ಷಣದ ಕನಸನ್ನು ನನಸು ಮಾಡಲು ಶಾಲೆ ಸ್ಥಾಪನೆಯಾಯಿತು. ಈ ಶಾಲೆ ಉತ್ತಮ ಫಲಿತಾಂಶ ವ್ಯಕ್ತಪಡಿಸುತ್ತ ಬಂದಿದೆ. ಹೀಗಾಗಿ ವಿದ್ಯಾಭಿಮಾನಿಗಳು ಮತ್ತು ಹಳೇ ವಿದ್ಯಾರ್ಥಿಗಳು ಶಾಲೆ ಪ್ರಗತಿಗೆ ಮುಕ್ತ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಬಿಆರ್‌ಪಿ ಮತ್ತು ಶ್ರೀ ಮಹಾವೀರ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಹೇಳಿದರು.

ಶ್ರೀ ಮಹಾವೀರ ವಿದ್ಯಾವರ್ಧಕ ಸಂಘದ ವತಿಯಿಂದ ಬುಧವಾರ ಇಲ್ಲಿನ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 58ನೇ ವಾರ್ಷಿಕೋತ್ಸವ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳೇ ವಿದ್ಯಾರ್ಥಿಗಳಾದ ಮುಂಡ್ಕೂರು ವಿದ್ಯಾವರ್ಧಕ ಪಪೂ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ ಹಾಗೂ ಉದ್ಯಮಿ ಪೃಥ್ವಿರಾಜ್ ಸ್ವಸ್ತಿ ವಾಚನ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ವಿರೂಪಾಕ್ಷಪ್ಪ, ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಬೊಲ್ಪು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಶ್ರೀನಿತ್ ಶೆಟ್ಟಿ, ಉದ್ಯಮಿ ಸುಶಾಂತ್ ಕರ್ಕೇರ, ಶ್ರೀ ಮಹಾವೀರ ಪಪೂ ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ ಮಾರ್ಲ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಾ.ರಾಮಕೃಷ್ಣ ಶಿರೂರು, ಶಾಲಾ ಸಂಚಾಲಕ ರಾಮ್‌ನಾಥ್ ಭಟ್, ಉಪಾಧ್ಯಕ್ಷ ಪುಷ್ಪರಾಜ್ ಜೈನ್, ರಾಮಪ್ರಸಾದ್ ಭಟ್, ನಿವೃತ್ತ ಮುಖ್ಯಶಿಕ್ಷಕಿ ಪದ್ಮಜಾ, ಟ್ರಸ್ಟ್ ಕೋಶಾಧಿಕಾರಿ ದಾಮೋದರ ಆಚಾರ್ಯ, ವಿದ್ಯಾರ್ಥಿ ನಾಯಕ ಪ್ರಣಾಮ್ ಉಪಸ್ಥಿತರಿದ್ದರು.

ಶಿಕ್ಷಕ ಕಿರಣ್ ಕುಮಾರ್ ಸ್ವಾಗತಿಸಿ. ಮುಖ್ಯಶಿಕ್ಷಕಿ ತೆರೆಜಾ ಕರ್ಡೋಜಾ ವಾರ್ಷಿಕ ವರದಿ, ಶಿಕ್ಷಕರಾದ ಅಣ್ಣು ಮತ್ತು ಪ್ರಶಾಂತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ನಿರೂಪಿಸಿ, ವಂದಿಸಿದರು.

ನಿವೃತ್ತ ಶಿಕ್ಷಕ ಶಂಕರ್ ಭಟ್, ದ್ವಿತೀಯ ದರ್ಜೆ ಸಹಾಯಕಿ ಮೇಬಲ್ ಸಿಂತಿಯಾ ಮೆಂಡೋನ್ಸಾ ಹಾಗೂ ಶಾಲಾ ಸಿಬ್ಬಂದಿ ಜಿತೇಶ್ ಅವರನ್ನು ಗೌರವಿಸಲಾಯಿತು.