ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪುದುಕೈ ಅಡ್ಡತ್ಪರಂಬ ಕುಳಿಕೊಂಡ್ ಹೌಸ್ನ ಕೆ.ಅಭಿಲಾಷ್(41)ಎಂಬುವರನ್ನು ಮನೆಯಿಂದ ಹೊರ ಕರೆದು ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನರಿಕ್ಕಾಟ್ ಅರ್ಜುನ್, ಅನೂಪ್, ಕಾವಡಿ ಅಭಿ, ವಿಷ್ಣು ಎಂಬುವರ ವಿರುದ್ಧ ಹೊಸದುರ್ಗ ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸಿದ್ದಾರೆ. ಇರಿತದಿಂದ ಗಂಭೀರ ಗಾಯಗೊಂಡ ಅಭಿಲಾಷ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಟ್ಸಾೃಪ್ನಲ್ಲಿ ಅಭಿಲಾಷ್ಗೆ ವಿಡಿಯೋ ಕರೆ ಮಾಡಿ ಬೆದರಿಕೆಯೊಡ್ಡಿದ್ದು, ನಂತರ ಅಭಿಲಾಷ್ನ ಮನೆ ಬಳಿ ಬಂದ ಆರೋಪಿಗಳು ಅಭಿಲಾಷ್ನನ್ನು ಹೊರಕ್ಕೆ ಕರೆದು ಚಾಕುವಿನಿಂದ ಇರಿದಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪೂರ್ವದ್ವೇಷ ಕೃತ್ಯಕ್ಕೆ ಕಾರಣವೆನ್ನಲಾಗಿದೆ.
ಕಾಸರಗೋಡು: ಜಿಲ್ಲೆಯ ವಿವಿಧೆಡೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ. ನಗರದ ಕರಂದಕ್ಕಾಡ್ನಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಎಸ್ಐ ವಿಜಯನ್ ಮೇಲೋತ್ ನೇತೃತ್ವದಲ್ಲಿ ಜಿಲ್ಲಾ ಡ್ರಗ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.50 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು, ಪಳ್ಳಿಕ್ಕರೆ ಪಳ್ಳಿಪುಳ ನಿವಾಸಿ ಗೋಕುಲ್ರಾಜೇಶ್(25) ಎಂಬಾತನನ್ನು ಬಂಧಿಸಿದ್ದಾರೆ. ಬೇರೊಂದು ಪ್ರಕರಣದ ತನಿಖೆಯ ಬಳಿಕ ವಿದ್ಯಾನಗರಕ್ಕೆ ಹಿಂತಿರುಗುತ್ತಿದ್ದ ವೇಳೆ ಕರಂದಕ್ಕಾಡ್ ತಲುಪುತ್ತಿದ್ದಂತೆ ಪೊಲೀಸರನ್ನು ಕಂಡು ಸಂಶಯಾಸ್ಪದ ರೀತಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಗೋಕುಲ್ರಾಜೇಶ್ ಬ್ಯಾಗ್ನಲ್ಲಿ ಎಂಡಿಎಂಎ ಪತ್ತೆಯಾಗಿತ್ತು.
ನೀಲೇಶ್ವರ ಕೋಟಪುರಂ ಸೇತುವೆ ಬಳಿ ನೀಲೇಶ್ವರ ಪೊಲೀಸ್ ಠಾಣೆ ಎಸ್ಐ ಸುಮೇಶ್ ಬಾಬು ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಆಗಮಿಸಿದ ಸ್ಕೂಟರನ್ನು ತಡೆದು ತಪಾಸಣೆಗೊಳಪಡಿಸಿದಾಗ ಅದರಲ್ಲಿ 1.5 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಒಯಿಞವಳಪು ಪೂಂಜಾವಿ ನಿವಾಸಿಗಳಾದ ಸಲಾಂ ಖಲೀಲ್(41) ಮತ್ತು ಸದ್ದಾಮ್ಹುಸೇನ್ ಆಶಿಕ್(30) ಎಂಬುವರನ್ನು ಬಂಧಿಸಿದ್ದಾರೆ. ಅವರು ಸಂಚರಿಸುತ್ತಿದ್ದ ಸ್ಕೂಟರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಪ್ತಿಯ ಕುಂಬ್ಡಾಜೆ ತಲೆಬೈಲಿನ ಹಿತ್ತಿಲೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ. ಜೂಜಾಟಕ್ಕೆ ಬಳಸಿದ್ದರೆನ್ನಲಾದ 2600 ರೂ. ಹಾಗೂ 5 ಅಂಕದ ಕೋಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆಬೈಲು ನಿವಾಸಿ ಜಯಕರ ಟಿ. (63), ಗಾಡಿಗುಡ್ಡೆಯ ಅಶ್ವತ್ಥ್ (55), ನಾರುಪಾಡಿಯ ಗೋಪಾಲ (60), ಪೆರಡಾಲ ವರ್ಮಲೆಯ ಬಿ. ಪ್ರಸನ್ನ (33), ಚಂದ್ರಶೇಖರ (39)ಬಂಧಿತರು. ಬದಿಯಡ್ಕ ಠಾಣೆ ಎಸ್ಐ ಟಿ. ಸುನಿಲ್ ಕುವಾರ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ.
ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಸಮೀಪ ಕಾರು ಡಿಕ್ಕಿಯಾಗಿ ತಾಯಿ ಹಾಗೂ ಪುತ್ರಿ ಗಾಯಗೊಂಡಿದ್ದು, ಜತೆಗಿದ್ದ ಮೊಮ್ಮಗ ಗಾಯಗಳಿಲ್ಲದೆ ಪಾರಾಗಿದ್ದಾನೆ. ಪಾವೂರು ಗೇರುಕಟ್ಟೆ ನಿವಾಸಿ ಶಾಂಭವಿ(68), ಪುತ್ರಿ ಸುಚಿತ್ರಾ(48) ಗಾಯಗೊಂಡಿದ್ದು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸಕ್ಕೆ ಸಂಬಂಧಿಸಿ ಶಾಂಭವಿ ತನ್ನ ಪುತ್ರಿ ಹಾಗೂ ಮೊಮ್ಮಗನ ಜತೆಗೆ ಇಲ್ಲಿನ ಒಂದು ಮನೆಗೆ ಬಂದಿದ್ದರು. ಮನೆಯವರಲ್ಲಿ ಮಾತುಕತೆ ನಡೆಸಿ ಬಳಿಕ ಹಿಂತಿರುಗಲೆಂದು ಮೂವರೂ ರಸ್ತೆಗಿಳಿದಿದ್ದು, ಈ ಮಧ್ಯೆ ಅತಿ ವೇಗದಲ್ಲಿ ಬಂದ ಕಾರು ಮೂರು ಮಂದಿಗೂ ಡಿಕ್ಕಿಯಾಗಿದೆ. ಶಬ್ದ ಕೇಳಿ ಸ್ಥಳೀಯರು ಓಡಿ ಬರುವ ಮಧ್ಯೆ ಕಾರಿನಲ್ಲಿದ್ದವರು ನಿಲ್ಲಿಸದೆ ಪರಾರಿಯಾಗಿದ್ದಾರೆ. ಮಂಜೇಶ್ವರ ಪೊಲೀಸರು ಅಪಘಾತಕ್ಕೆ ಕಾರಣವಾಗಿರುವ ಕಾರನ್ನು ವಶಕ್ಕೆ ತೆಗೆದುಕೊಂಡು ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.