ಮೊಹಮ್ಮದ್ ಅಶ್ರಫ್ 
ದಕ್ಷಿಣ ಕನ್ನಡ

ಮಾದಕ ವಸ್ತು ಮಾರಾಟಕ್ಕೆ ಯತ್ನ

ಪುದು ಗ್ರಾಮದ ನಿವಾಸಿ ಬಂಧನ

ಬಂಟ್ವಾಳ: ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್‌ಗೇಟ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಗುರುವಾರ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಪೊಲೀಸರು, ಮಾದಕ ವಸ್ತು ಸಹಿತ ಒಟ್ಟು 1.93 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪುದು ಗ್ರಾಮದ ಅಮ್ಮೆಮಾರ್ ನಿವಾಸಿ, ಪ್ರಸ್ತುತ ಫರಂಗಿಪೇಟೆಯ ಟಿ.ಕೆ.ಫ್ಲಾೃಟ್‌ನಲ್ಲಿ ವಾಸವಿರುವ ಅಶ್ರಫ್ ಯಾನೆ ಮೊಹಮ್ಮದ್ ಅಶ್ರಫ್(48) ಬಂಧಿತ ಆರೋಪಿ.

ಖಚಿತ ಮಾಹಿತಿಯಂತೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ತಂಡ ದಾಳಿ ನಡೆಸಿತು. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಶ್ರಫ್‌ನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಪ್ಯಾಂಟ್ ಜೇಬಿನಲ್ಲಿ ನಾಲ್ಕು ಪ್ಯಾಕೆಟ್‌ಗಳು ಹಾಗೂ ಸ್ಕೂಟರ್‌ನ ಸೀಟಿನಡಿಯಲ್ಲಿದ್ದ ಐದು ಪ್ಯಾಕೆಟ್‌ಗಳಲ್ಲಿ ಬಿಳಿ ಪುಡಿ ಪತ್ತೆಯಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಆಂಫೆಟಮೈನ್/ಮೆಥಾಂಫೆಟಮೈನ್ ಮಾದರಿಯ ಮಾದಕ ವಸ್ತುವೆಂದು ಶಂಕಿಸಲಾಗಿದೆ. 2 ಮೊಬೈಲ್ ಫೋನ್, 1,870 ರೂ. ನಗದು, ಡೆಬಿಟ್ ಕಾರ್ಡ್, ಎಂಟು ಖಾಲಿ ಜಿಪ್‌ಲಾಕ್ ಕವರ್‌ಗಳು, ತೂಕದ ಯಂತ್ರ ಹಾಗೂ ಆ್ಯಕ್ಟಿವಾ ಸ್ಕೂಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.