ಬಾಬು ಬಿ.ಎನ್. ಅವರ ಮನೆಯಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನ, ಬೆಳ್ಳಿಯ ಆಭರಣಗಳು.
ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಂಗಳೂರು ವ್ಯಾಪ್ತಿಯ ಪ್ರಾದೇಶಿಕ ಉಪ ಔಷಧ ನಿಯಂತ್ರಕರ ಕಛೇರಿಯಲ್ಲಿ ಸಹಾಯಕ ಔಷಧ ನಿಯಂತ್ರಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಾಬು ಬಿ.ಎನ್. ಅವರ ಬಳಿ ಇರುವ ಒಟ್ಟು 3,37,04,000.00 ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗಳನ್ನು ಮಂಗಳವಾರ ಪತ್ತೆ ಮಾಡಿದ್ದಾರೆ.
ಬಾಬು ಬಿ.ಎನ್. ತನ್ನ ಸೇವಾವಧಿಯಲ್ಲಿ ನ್ಯಾಯಬದ್ದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಪೊಲೀಸ್ ಇನ್‌ಸ್ಪೆಕ್ಟರ್ ಚಂದ್ರಶೇಖರ ಕೆ.ಎನ್. ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧೀಕ್ಷ ಬಿ.ಪಿ.ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ 6 ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡಗಳು ಕಾರ್ಯಾಚರಣೆ ನಡೆಸಿವೆ.
ಬಾಬು ಬಿ.ಎನ್.ಗೆ ಸಂಬಂಧಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಟೌನ್‌ನಲ್ಲಿರುವ ವಾಸದ ಮನೆಗಳು ವಾಣಿಜ್ಯ ಮಳಿಗೆಗಳು, ಬೆಂಗಳೂರು ನಗರದಲ್ಲಿನ ಫ್ಲಾಟ್ ಮತ್ತು ವಾಸದ ಮನೆಗಳು, ಮಂಗಳೂರಿನಲ್ಲಿರುವ ವಾಸ್ತವ್ಯದ ಮನೆ ಹಾಗೂ ಕರ್ತವ್ಯ ನಿರ್ವಹಿಸುವ ಕಛೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅವರಿಗೆ ಸಂಬಂಧಿಸಿದೊ ಒಟ್ಟು 3,37,04,000.00 ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಪತ್ತೆ ಮಾಡಿದ್ದಾರೆ. ಬಾಬು ಅವರಿಗೆ ಸಂಬಂಧಿಸಿದ ಬೆಂಗಳೂರಿನ ವಾಸದ ಮನೆಯಲ್ಲಿ 23,64,000 ರೂ. ನಗದು ಹಾಗೂ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ವಿಭಾಗದ ಡಿ.ವೈ.ಎಸ್.ಪಿ ಡಾ. ಗಾನ ಪಿ ಕುಮಾರ್ ಮತ್ತು ಸುರೇಶ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ, ಭಾರತಿ ಜಿ, ಶಿವರಾಜ್‌ಕುಮಾರ್, ರಾಜೇಂದ್ರ ನಾಯ್ಕ ಹಾಗೂ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕಾಯುಕ್ತ ಘಟಕಗಳ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.