ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ಜಾಗದ ವಿಚಾರವಾಗಿ ಎರಡು ಕಡೆಯವರ ನಡುವೆ ನಡೆದ ಗಲಾಟೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪಕ್ಕೆ ಕಾರಣವಾಗಿದೆ. ಎರಡೂ ಕಡೆಯವರು ಪ್ರತ್ಯೇಕ ದೂರು ನೀಡಿರುವ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಐತ್ತೂರು ನಿವಾಸಿ ನೀಲಮ್ಮ (46) ಅವರ ಪತಿ ಮೃತಪಟ್ಟಿದ್ದು, ಅವರು ತಮ್ಮ ಮಗಳೊಂದಿಗೆ ವಾಸಿಸುತ್ತಿದ್ದಾರೆ. ನ.25ರಂದು ಮಧ್ಯಾಹ್ನ ನೀಲಮ್ಮ ಅವರು ಮನೆಯಲ್ಲಿದ್ದ ವೇಳೆ ದಿನಕರ ಅಲಿಯಾಸ್ ವಿನೋದ, ಚೈತ್ರಾ ಹಾಗೂ ಇತರ ಆರು ಮಂದಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಜಾಗದ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ನೀಲಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೊಂದೆಡೆ, ಐತ್ತೂರು ನಿವಾಸಿ ದಿನಕರ (27) ಅವರು ನೀಡಿದ ದೂರಿನಂತೆ, ತಂದೆಯ ಹೆಸರಿನಲ್ಲಿರುವ ಐತ್ತೂರು ಗ್ರಾಮದ ಜಮೀನಿನಿಂದ ನ.25ರಂದು ಬೆಳಗ್ಗೆ ತಾವು ಹಾಗೂ ಪತ್ನಿ ಚೈತ್ರಾ ಸ್ಕೂಟರ್ನಲ್ಲಿ ಅಡಿಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆಸ್ತಿ ವಿಚಾರದ ತಕರಾರಿನ ಹಿನ್ನೆಲೆಯಲ್ಲಿ ನೀಲಮ್ಮ ಅವರು ತಮಗೆ ಹಾಗೂ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಎರಡೂ ಟನೆಗಳಿಗೆ ಸಂಬಂಧಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.