ಸಚಿವ ಯು.ಟಿ.ಖಾದರ್ ಎಂ.ಆರ್.ಪೂವಮ್ಮ ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ದರ್ಶನ್ ಎಚ್.ವಿ., ನರ್ವಡೆ ವಿನಾಯಕ್ ಕರ್ಭಾರಿ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

6ರಂದು ಏಷ್ಯನ್ ಗೇಮ್ಸ್ ಸಾಧಕರಿಗೆ ಬೆಂಗಳೂರಿನಲ್ಲಿ ಗೌರವ

ಎಂ.ಆರ್.ಪೂವಮ್ಮಗೆ ಅಭಿನಂದನೆ ಸಲ್ಲಿಸಿ ಸಚಿವ ಖಾದರ್ ಮಾಹಿತಿ

ಮಂಗಳೂರು: ಜಪಾನ್‌ನ ನಾಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡು ಅಧ್ಭುತ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಪರವಾಗಿ ಸಿಎಂ ಅವರು ಅ.6ರಂದು ಅಭಿನಂದನಾ ಸಮಾರಂಭ ಆಯೋಜಿಸಿದ್ದಾರೆ. ಅಂದು ಅವರು ಪ್ರೋತ್ಸಾಹಧನ ಮೊತ್ತ ಘೋಷಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಎಂ.ಆರ್.ಪೂವಮ್ಮ ಅವರ ಮನೆಗೆ ಶನಿವಾರ ಭೇಟಿ ನೀಡಿ ಅವರನ್ನು ಹಾಗೂ ಕೋಚ್ ದಿನೇಶ್ ಕುಂದರ್ ಅವರನ್ನು ಜಿಲ್ಲಾಡಳಿತದ ಪರವಾಗಿ ಅಭಿನಂದಿಸಿ ಸುದ್ದಿಗಾರರ ಜತೆ ಮಾತನಾಡಿದರು. ಪೂವಮ್ಮ ಅವರ ಯಶಸ್ಸು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ಣು ತೆರೆಸಿದೆ. ಸಾಧಕ ಕ್ರೀಡಾಪಟುಗಳಿಗೆ ಬೇರೆ ರಾಜ್ಯಗಳಲ್ಲಿ ನೀಡಲಾದ ಪ್ರೋತ್ಸಾಹದ ಧನದ ಮೊತ್ತವನ್ನು ಸರ್ಕಾರ ಗಮನಿಸಿ ಇಲ್ಲಿಯೂ ಕಡಿಮೆಯಾಗದಂತೆ ನೀಡುವ ವಿಶ್ವಾಸವಿದೆ ಎಂದರು.

ಪೂವಮ್ಮ ಯುವ ಜನತೆಗೆ ಪ್ರೇರಣೆ

ಜಪಾನ್‌ನ ನಾಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಮಂಗಳೂರಿನ ಎಂ.ಆರ್.ಪೂವಮ್ಮ ಯುವಜನತೆಗೆ ಪ್ರೇರಣೆ. ಪ್ರಾಮಾಣಿಕತೆ, ಬದ್ಧತೆ, ಕಠಿಣ ಪರಿಶ್ರಮದಿಂದ ಅಭ್ಯಾಸ ನಡೆಸಿ ದೇಶಕ್ಕೆ ಗೌರವ ತಂದಿದ್ದಾರೆ. ಹಿಂದಿನ ಸಾಧನೆಯ ಸಂದರ್ಭ ಸರ್ಕಾರದ ಮಟ್ಟದಿಂದ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗದಿದ್ದರೂ ಎದೆಗುಂದದೆ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಇವರ ಸಾಧನೆಯನ್ನು ಪ್ರೇರಣೆಯಾಗಿ ತೆಗೆದುಕೊಂಡು ಇನ್ನಷ್ಟು ಸಾಧನೆ ಮಾಡಬೇಕು ಎಂದವರು ಹೇಳಿದರು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ.ಸಿಇಒ ನರ್ವಡೆ ವಿನಾಯಕ ಕಾರ್ಬಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್., ಮುಡಾ ಅಧ್ಯಕ್ಷ ಸಂತೋಷ್ ಕುಮಾರ್, ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಕಣಚೂರು ಮೋನು ಮೊದಲಾದವರಿದ್ದರು.

ದೂರವಾಣಿ ಕರೆ ಮಾಡಿ ಸಿಎಂ ಅಭಿನಂದನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏಷ್ಯನ್ ಗೇಮ್ಸ್‌ನ ಮಹಿಳೆಯರ 4*400 ಮೀಟರ್ ರಿಲೇ ಓಟದಲ್ಲಿ ಚಿನ್ನ ಹಾಗೂ ಮಿಶ್ರ 4*400 ಮೀಟರ್ ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಕರ್ನಾಟಕದ ಖ್ಯಾತ ಓಟಗಾರ್ತಿ ಎಂ.ಆರ್. ಪೂವಮ್ಮ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

ಈ ಗಮನಾರ್ಹ ಸಾಧನೆಯನ್ನು ಶ್ಲಾಘಿಸಿದ ಅವರು, ಕರ್ನಾಟಕದ ಕ್ರೀಡಾಪಟುಗಳ ಪ್ರತಿಭೆಗೆ ಬೆಂಬಲ ನೀಡಲು ಹಾಗೂ ಅಥ್ಲೀಟ್‌ಗಳು ಇನ್ನಷ್ಟು ಉನ್ನತ ಎತ್ತರಕ್ಕೆ ಬೆಳೆಯಲು ಶಕ್ತಿ ತುಂಬಲು ಸರ್ಕಾರ ಬದ್ಧವಾಗಿದೆ. 6ರಂದು ಬೆಂಗಳೂರಿನಲ್ಲಿ ಸರ್ಕಾರದಿಂದ ಅಭಿನಂದನೆ ಸಮಾರಂಭ ಆಯೋಜಿಸಲಾಗಿದ್ದು, ಪಾಲ್ಗೊಳ್ಳಲು ಆಹ್ವಾನ ನೀಡಿದರು.