ARREST 
ದಕ್ಷಿಣ ಕನ್ನಡ

ತಳಂಗರೆ ಕೊಲೆ ಆರೋಪಿಗಳ ಬಂಧನ

ದರೋಡೆ ಸಹಿತ ಹಲವು ಪ್ರಕರಣಗಳಲ್ಲಿ ಶಾಮೀಲು

ಕಾಸರಗೋಡು: ತಳಂಗರೆ ಕಡವತ್‌ನ ಕಟ್ಟಡದೊಳಗೆ ವ್ಯಕ್ತಿಯೊಬ್ಬರನ್ನು ಕತ್ತು ಬಿಗಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ದರೋಡೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಕರ್ನಾಟಕ ನಿವಾಸಿ ಅಫ್ರೀದ್ ಖಾನ್(24), ಆತನ ಸಹಚರರಾದ ವಿನೋದ್ ರಾಜಾರಾಮ್ ಕಾಂಬ್ಲೆ(36), ಅಮೃತ್ ಬೋಳಿ ಶೆಟ್ಟಿ(33) ಬಂಧಿತರು. ರಿಮಾಂಡ್‌ನಲ್ಲಿರುವ ಆರೋಪಿಗಳನ್ನು ಗುರುತು ಹಚ್ಚುವ ಪರೇಡ್ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ದಾವಣಗೆರೆ ನಿವಾಸಿ ನಜೀಮುಲ್ಲ(50) ಎಂಬುವರನ್ನು ತಂಡ ಉಸಿರುಗಟ್ಟಿಸಿ ಕೊಲೆಗೈದಿರುವ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನಜೀಮುಲ್ಲ ಹಾಗೂ ಇತರ ಮೂವರು ಬೆಂಗಳೂರಿನಲ್ಲಿ ಪರಿಚಿತರಾಗಿದ್ದು ಅಕ್ಟೋಬರ್ ಮೊದಲ ವಾರ ತಳಂಗರೆಗೆ ಬಂದು ಕಡವತ್‌ನ ಕಟ್ಟಡವೊಂದರ ಮೇಲಂತಸ್ತಿನಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದರು. ನಜೀಮುಲ್ಲ ಅವರನ್ನು ತಂಡ ಕೊಲೆಗೈದು ಪರಾರಿಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.