ಐಸಿಡಿಎಸ್ 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ ಎ.20ರಂದು ಬೆಳಗ್ಗೆ 9 ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಐಸಿಡಿಎಸ್ 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ ಎ.20ರಂದು ಬೆಳಗ್ಗೆ 9 ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ತಾರಾ ಬಲ್ಲಾಳ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ ಸಹಿತ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ರಾಜ್ಯ, ಜಿಲ್ಲಾ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಸುಮಾರು 2,500 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಲಿದ್ದಾರೆ. ಸಂಘದ ಪಾಧಿಕಾರಿಗಳಾಗಿದ್ದು, ನಿವೃತ್ತರಾದವರಿಗೆ ಸಮ್ಮಾನ ನಡೆಯಲಿದ್ದು, ಸಂಘದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೆ ಕನಿಷ್ಠವೇತನ ಜಾರಿಗೆ ಸಂಬಂಧಿಸಿದ ವಿಚಾರ ಈಗಾಗಲೇ ನ್ಯಾಯಾಯದಲ್ಲಿ ವಿಚಾರಣೆ ಹಂತದಲ್ಲಿದೆ. ವೇತನ ಜಾರಿಗೆ ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಈಗಾಗಲೇ ಈ ಸಂಬಂಧ ಹಲವು ಪ್ರತಿಭಟನೆಗಳನ್ನು ನಡೆಸಲಾಗಿದ್ದು, ಇನ್ನು ನ್ಯಾಯಾಲಯದ ಆದೇಶದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕನಿಷ್ಠ ವೇತನ ಜಾರಿಯಾಗದ ಹೊರತು ಬೇರೆ ಯಾವ ಹೆಚ್ಚುವರಿ ಕೆಲಸವನ್ನೂ ಮಾಡುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ರಾಜ್ಯ ಕೋಶಾಧಿಕಾರಿ ವಿಶಾಲಾಕ್ಷಿ ತಿಳಿಸಿದರು.
ಸಂಘದ ಕರ್ಯದರ್ಶಿ ಆಶಾಲತಾ, ರಾಜ್ಯ ಪ್ರತಿನಿಧಿ ಚಂದ್ರಾವತಿ, ಬಂಟ್ವಾಳ ತಾಲೂಕು ಅಧ್ಯಕ್ಷೆ ವಿಜಯವಾಣಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ರಾಜೀವಿ ಉಪಸ್ಥಿತರಿದ್ದರು.