ಕುಸಿತ ಭೀತಿಯಲ್ಲಿರುವ ಬೆಣ್ಗೇರೆ ಅಂಗನವಾಡಿ ಕಟ್ಟಡ. 
ದಕ್ಷಿಣ ಕನ್ನಡ

ಕುಸಿವ ಭೀತಿಯಲ್ಲಿ ಅಂಗನವಾಡಿ

ಗೋಡೆಗಳಲ್ಲಿ ಬಿರುಕು, ಮೇಲ್ಛಾವಣಿ ಶಿಥಿಲ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಣ್ಗೇರೆ ಅಂಗನವಾಡಿ ಕಟ್ಟಡ ಶಿಥಿಲಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಅಂಗನವಾಡಿಯಲ್ಲಿ ಪ್ರಸ್ತುತ 28ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಂಗನವಾಡಿ ಎದುರಿನ ಗೋಡೆಯಲ್ಲಿ ದೊಡ್ಡ ದೊಡ್ಡ ರಂಧ್ರಗಳು ಕಾಣಿಸಿಕೊಂಡಿದ್ದು, ಗೋಡೆಗಳಲ್ಲಿ ಬಿರುಕುಗಳು ಕಂಡುಬಂದಿವೆ. ಮೇಲ್ಛಾವಣಿ ಕೂಡ ಶಿಥಿಲಗೊಂಡಿದ್ದು ಕುಸಿವ ಭೀತಿಯಲ್ಲಿದೆ.

ಅಂಗನವಾಡಿ ಪ್ರಾರಂಭಗೊಂಡ ಬಳಿಕ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಅಲ್ಪಸ್ವಲ್ಪ ದುರಸ್ತಿ ವಾಡಲಾಗಿದ್ದರೂ ಇದೀಗ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಹಳೇ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕಾದ ಅಗತ್ಯ ಇದೆ.

ಕಟ್ಟಡ ದುರಸ್ತಿಗೆ ಒಂದು ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಅನುದಾನ ಯಾವುದಕ್ಕೂ ಸಾಲದು ಎಂಬ ವಾತು ಸ್ಥಳೀಯರಿಂದ ಕೇಳಿಬಂದಿದೆ.

ಖಾಸಗಿ ಜಾಗದಲ್ಲಿರುವ ಕಟ್ಟಡ

ಅಂಗನವಾಡಿ ಕಟ್ಟಡ ಜಾಗದ ಸಮಸ್ಯೆಯಿಂದ ಸ್ಥಳಾಂತರ ಭೀತಿ ಎದುರಿಸುತ್ತಿದೆ. ಅಂಗನವಾಡಿ ಕೇಂದ್ರ ಇರುವ ಜಾಗ ಖಾಸಗಿಯವರೊಬ್ಬರಿಗೆ ಸೇರಿದೆ ಎನ್ನಲಾಗಿದ್ದು, 40 ವರ್ಷಗಳ ಹಿಂದೆ ಸರ್ಕಾರದ ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ಬಿಟ್ಟುಕೊಟ್ಟಿದ್ದರು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜಾಗವನ್ನು ಇಲಾಖೆ ಹೆಸರಿಗೆ ಮಾಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡದಂತೆ ಸಂಬಂಧಪಟ್ಟ ಇಲಾಖೆ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಜಾಗ ಬಿಟ್ಟುಕೊಡುವಂತೆ ಮಾಲೀಕರಿಗೆ ಮನವಿ ಮಾಡಲಾಗಿದೆ.

ಸ್ಥಳೀಯರ ಬೇಡಿಕೆ ಮೇರೆಗೆ ನಾಲ್ಕು ದಶಕಗಳ ಹಿಂದೆ ಬೆಣ್ಗೇರೆ ಪ್ರದೇಶಕ್ಕೆ ಅಂಗನವಾಡಿ ಕೇಂದ್ರ ಮಂಜೂರಾಗಿತ್ತು. ಸರ್ಕಾರದ ಬೇರೆ ಬೇರೆ ಅನುದಾನಗಳು ಈ ಕಟ್ಟಡಕ್ಕೆ ಬಳಸಿಕೊಳ್ಳಲಾಗಿದೆ. ಅಂಗನವಾಡಿ ಕಟ್ಟಡ ಇರುವ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಖರೀದಿಸಿದ್ದು, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈಗಿನ ಕಟ್ಟಡ ಶಿಥಿಲಗೊಂಡಿರುವುದರಿಂದ ದುರಸ್ತಿಗೆ ಇಲಾಖೆ ಅನುದಾನ ನೀಡಬೇಕು.
ವಿನೋದ ಕುಮಾರ್ ಸಾಮಾಜಿಕ ಕಾರ್ಯಕರ್ತ