ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಬದಿಯ ಪಾದಚಾರಿ ಮಾರ್ಗದಲ್ಲಿ ಟೆಲಿಕಾಂ ಅಧಿಕಾರಿಗಳು ಕೇಬಲ್ ಅಳವಡಿಸಲು ತೆಗೆದ ಗುಂಡಿಯನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಮೊಗ್ರಾಲ್ ಪೇಟೆಯ ಫುಟ್‌ಪಾತ್‌ನಲ್ಲಿರುವ ಗುಂಡಿ ಮುಚ್ಚಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮೀಪದ ಒಳದಾರಿಯನ್ನು ಇಂಟರ್‌ಲಾಕ್ ಅಳವಡಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದೀಗ ಈ ರಸ್ತೆಯಲ್ಲಿ ಕೇಬಲ್ ಅಳವಡಿಸಲೆಂದು ಅಗೆದ ಗುಂಡಿಯನ್ನು ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟಿರುವುದು ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ. ಸ್ಥಳದಲ್ಲಿ ಯಾವುದೇ ಎಚ್ಚರಿಕಾ ಫಲಕ ಅಥವಾ ಬ್ಯಾರಿಕೇಡ್ ಕೂಡ ಅಳವಡಿಸಿದೆ ಸಂಬಂಧಪಟ್ಟವರು ಬೇಜವಾಬ್ದಾರಿ ತೋರಿದ್ದಾರೆ.
ಸಮರ್ಪಕ ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲದೆ ರಾತ್ರಿ ಸಮಯದಲ್ಲಿ ಗುಂಡಿ ಸರಿಯಾಗಿ ಕಾಣಿಸದೆ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ಸಾಮಾನ್ಯ ಎಂಬಂತಾಗಿದೆ. ಗುಂಡಿ ಪಕ್ಕದಲ್ಲೇ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು ವಾಹನ ಸಾವರರು ಗುಂಡಿ ತಪ್ಪಿಸಲು ಹೋಗಿ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಡಿಕ್ಕಿ ಹೊಡೆದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.