ಅಂಬ್ಲಮೊಗರು ಗ್ರಾಮಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಎಸ್.ಮಹಮ್ಮದ್ ಇಕ್ಬಾಲ್ ಮಾತನಾಡಿದರು. ಉಪಾಧ್ಯಕ್ಷೆ ಮಮ್ತಾಝ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಮೊದಲಾದವರಿದ್ದರು.
ಅಂಬ್ಲಮೊಗರು ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ದ್ವಿತೀಯ ಹಂತದ ಹಾಗೂ ಜನಪ್ರತಿನಿಧಿಗಳ ಆಡಳಿತದ ಕೊನೆಯ ಗ್ರಾಮಸಭೆ ಸೋಮವಾರ ಗ್ರಾ.ಪಂ. ವಠಾರದಲ್ಲಿ ನಡೆಯಿತು. ಗ್ರಾಮಸ್ಥೆ ಜಮೀಲಾ ಮಾತನಾಡಿ, ಅಂಬ್ಲಮೊಗರು ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ನಮ್ಮ ಮೂರು ದನಗಳು ಸತ್ತು ಹೋಗಿವೆ. ದನಗಳ ಆರೋಗ್ಯ ಹದಗೆಟ್ಟಾಗ ನಾವು ಕರೆ ಮಾಡಿದರೆ ಆಂಬುಲೆನ್ಸ್‌ಗೆ ಕರೆ ಮಾಡುವಂತೆ ಹೇಳುತ್ತಾರೆ ಎಂದು ಅಳಲು ತೋಡಿಕೊಂಡರು.
ಗ್ರಾಮದಲ್ಲಿ ದೊಡ್ಡ ಪಶು ಆಸ್ಪತ್ರೆ ಆಗಿದೆ. ವೈದ್ಯರಿಲ್ಲದೆ ಉದ್ಘಾಟನೆಗೆ ನಾವು ಅವಕಾಶ ಕೊಡದೆ ಬಹಿಷ್ಕರಿಸಿದ್ದೇವೆ. ದೂರುದಾರೆ ಹಾಲು ಮಾರಿ ಜೀವನ ಸಾಗಿಸುತ್ತಿದ್ದು, ದೂರು ಕೊಟ್ಟ ಬಳಿಕ ವೈದ್ಯರು ಬರಬೇಕು, ಇಲ್ಲವೇ ಆಗುವುದಿಲ್ಲ ಎಂದು ಹೇಳಿದರೆ ನಾವು ಪರ್ಯಾಯ ವ್ಯವಸ್ಥೆ ಮಾಡುತ್ತೇವೆಂದು ಪಶುಸಖಿ ಬಳಿ ಅಧ್ಯಕ್ಷ ಎಸ್.ಮಹಮ್ಮದ್ ಇಕ್ಬಾಲ್ ಅಸಮಾಧಾನ ವ್ಯಕ್ತಪಡಿಸಿದರು.
ನಾಲ್ಕು ವರ್ಷಗಳಿಂದ ಕಂಡಿಲದಿಂದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಹೋಗಲು ರಸ್ತೆಯೇ ಇಲ್ಲ. ತಹಸೀಲ್ದಾರ್ ಈ ಬಗ್ಗೆ ಮೌನವಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ಅಹೋರಾತ್ರಿ ಕೆಲಸ ನಡೆಯುತ್ತಿದ್ದು ಕಂದಾಯ ಇಲಾಖೆ ಮೌನವೇಕೆ? ಮೈದಾನದ ಮೀಸಲು ಜಾಗ, ದೇವಸ್ಥಾನ ಸಂಪರ್ಕ ರಸ್ತೆ ಎಲ್ಲಿದೆ? ಎಂದು ಸಿಪಿಐಎಂ ಮುಖಂಡ ಇಬ್ರಾಹಿಂ ಮದಕ ಪ್ರಶ್ನಿಸಿದರು.
200 ಎಕರೆಗಳಷ್ಟು ವರ್ಗ ಮತ್ತು ಸರ್ಕಾರಿ ಜಾಗವಿದ್ದು ಮೂರು ಗ್ರಾಮಗಳಿಗೆ ಸಂಬಂಧಿಸಿದೆ. ಜಾಗದ ಬಗ್ಗೆ ಪೂರ್ಣ ವಿವರ ಕಲೆ ಹಾಕಲಾಗಿದ್ದು ಸರ್ವೇ ಇಲಾಖೆ ಸ್ಪಷ್ಟ ವರದಿ ಕೊಡಬೇಕಿದೆ. ಖಾಸಗಿ ಜಾಗಕ್ಕೆ ಅಧಿಕಾರಿಗಳು ಹೋಗುವಂತಿಲ್ಲ. ಪಾವೂರಿನಲ್ಲಿ ಈಗಾಗಲೇ ಖಾಸಗಿ ಜಾಗದವರು ಕೇಸ್ ಹಾಕಿದ್ದಾರೆ. ಸರ್ಕಾರಿ ಜಾಗದಲ್ಲಿ ಕೆಲಸ ನಡೆಯುತ್ತಿದ್ದರೆ ನಿಲ್ಲಿಸುವುದಾಗಿ ಅಂಬ್ಲಮೊಗರು ಗ್ರಾಮ ಆಡಳಿತಗಾರೆ ನಯನಾ ಸಮಜಾಯಿಷಿ ನೀಡಿದರು.
ಯು.ಟಿ.ಫರೀದ್ ಹೆಸರಲ್ಲಿ ನಾಲ್ಕೂವರೆ ಎಕರೆ ಜಮೀನು ಮೈದಾನಕ್ಕೆ ಮೀಸಲಿಡಲಾಗಿದೆ. ಆದರೆ ಈಗಿರುವ ಜಾಗ ರಸ್ತೆಬದಿ ಇರುವುದರಿಂದ ಪಂಚಾಯಿತಿಗೆ ಆದಾಯ ಬರುವಂತಹ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸ್ಪೀಕರ್ ಭರವಸೆ ಮೇರೆಗೆ ಕಾದಿರಿಸಲಾಗಿದೆ. ಒಳಭಾಗದಲ್ಲಿ ಜಾಗ ಸಿಗದಿದ್ದರೆ ಮೀಸಲು ಜಾಗದಲ್ಲೇ ಆಟದ ಮೈದಾನ ನಿರ್ಮಿಸಲಾಗುವುದು. ಸರ್ಕಾರಿ ಜಾಗಕ್ಕೆ ಖಾಸಗಿಯವರು ಮಣ್ಣು ಹಾಕಿದ್ದರೆ ಸರ್ವೇ ಮಾಡಿ ವಶಕ್ಕೆ ಪಡೆಯಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಎಸ್.ಮಹಮ್ಮದ್ ಇಕ್ಬಾಲ್ ಮಾಹಿತಿ ನೀಡಿದರು.
ನೀರು ಹರಿಯುವ ಮೋರಿ ಮುಚ್ಚಲಾಗಿದ್ದು ಕಲುಷಿತ ನೀರು ನಿಂತು ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ದೂರಿದರು. ಗ್ರಾಮಸ್ಥರ ಜತೆ ನಾವಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರ ಜತೆ ನಾವೂ ತಹಸೀಲ್ದಾರ್ ಬಳಿ ಚರ್ಚಿಸೋಣ ಎಂದು ಪಿಡಿಒ ಅಬ್ದುಲ್ ಖಾದರ್ ಐ. ಹಾಗೂ ಮಾರ್ಗದರ್ಶಿ ಅಧಿಕಾರಿ ಎಚ್.ಆರ್.ಈಶ್ವರ್ ಭರವಸೆ ನೀಡಿ ಮಾತಿಗೆ ಚರ್ಚೆ ಮುಕ್ತಾಯಗೊಳಿಸಿದರು.
ಪಾಲಕರಿಗೆ ಗಣಿತ ಗಣಕ ಪಾಠ!