ಗುರುಪುರ: ಎಡಪದವಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಗುರುವಾರ ಪದವಿ ಪೂರ್ವ ಕಾಲೇಜುಗಳ 2026-27ನೇ ಶೈಕ್ಷಣಿಕ ಸಾಲಿನ ಜಿಲ್ಲಾಮಟ್ಟದ ಗುಡ್ಡಗಾಡು ಓಟ(ಕ್ರಾಸ್‌ಕಂಟ್ರಿ ರೇಸ್) ನಡೆಯಿತು.
28 ತಂಡಗಳು ಭಾಗವಹಿಸಿದ್ದವು. ಪುರುಷರಿಗೆ 6 ಕಿ.ಮೀ. ಹಾಗೂ ಮಹಿಳೆಯರಿಗೆ 5 ಕಿ.ಮೀ. ಓಟ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಸಮರ್ಥ ಪ್ರಥಮ ಸ್ಥಾಮ ಸಂತೋಷ್ ದ್ವಿತೀಯ ಸ್ಥಾನ ಮತ್ತು ವರುರ್ಣ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ನಾಗಿಣಿ ಪ್ರಥಮ ಮತ್ತು ಪ್ರಿಯಾಂಕಾ ಜಿ.ಕಿರಣ್ ದ್ವಿತೀಯ ಸ್ಥಾನ ಗಳಿಸಿದರು. ನೂಜಿಬಾಳ್ತಿಲದ ಬೆಥನಿ ಪಿಯು ಕಾಲೇಜಿನ ಮೋಕ್ಷಾ ಪಿ. ತೃತೀಯ ಸ್ಥಾನ ಗಳಿಸಿದರು. ಇವರೆಲ್ಲ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪುರುಷರ ವಿಭಾಗದ ತಂಡ ಬಹುಮಾನ ಆಳ್ವಾಸ್ ಪಿಯು ಕಾಲೇಜು ಪ್ರಥಮ, ಎಸ್‌ಡಿಎಂ ಪಿಯು ಕಾಲೇಜು ಉಜಿರೆ ದ್ವಿತೀಯ, ಆತಿಥೇಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜು ತೃತೀಯ ಸ್ಥಾನ ಹಾಗೂ ಶ್ರೀ ನಿರಂಜನ ಸ್ವಾಮಿ ಪಿಯು ಕಾಲೇಜು ಸುಂಕದಕಟ್ಟೆ 4ನೇ ಸ್ಥಾನ ಪಡೆದುಕೊಂಡಿದೆ.
ಮಹಿಳೆಯರ ವಿಭಾಗದ ತಂಡ ಬಹುಮಾನ ಆಳ್ವಾಸ್ ಪ್ರಥಮ, ಬೆಥನಿ ದ್ವಿತೀಯ, ಶ್ರೀ ರಾಮಕುಂಜೇಶ್ವರ ಪಿಯು ಕಾಲೇಜು ರಾಮಕುಂಜ ತೃತೀಯ ಹಾಗೂ ಆತಿಥೇಯ ಸ್ವಾಮಿ ವಿವೇಕಾನಂದ ಕಾಲೇಜು 4ನೇ ಸ್ಥಾನ ಪಡೆದುಕೊಂಡಿದೆ.
ಎಡಪದವು ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಗಾಯತ್ರಿ ಅಧ್ಯಕ್ಷೆ ವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ರಾಧಾಕೃಷ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ದಾಮೋದರ ಗೌಡ, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ಪ್ರೌಢಶಾಲಾ ಮುಖ್ಯಶಿಕ್ಷಕ ವಾಸು ಕೆ. ಉಪಸ್ಥಿತರಿದ್ದರು. ಅಪರ್ಣಾ ಕಾರಂತ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಾಂತಾರಾಮ ರೈ ಬಹುಮಾನ ವಿತರಿಸಿದರು. ಉಪನ್ಯಾಸಕ ನವೀನ್ ಕೊರೆಯ ವಂದಿಸಿದರು.