ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದ ಆಳ್ವಾಸ್ ಶಾಲೆ ತಂಡ.  
ದಕ್ಷಿಣ ಕನ್ನಡ

ಜಿಲ್ಲಾಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಆಳ್ವಾಸ್ ಚಾಂಪಿಯನ್ : 83 ಪದಕ ಸಾಧನೆ

ಮೂಡುಬಿದಿರೆ: ಪಂಜ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ 14 ಹಾಗೂ 17 ವರ್ಷ ವಯೋಮಿತಿ ಒಳಗಿನ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು 37 ಚಿನ್ನ, 30 ಬೆಳ್ಳಿ ಮತ್ತು 16 ಕಂಚಿನ ಪದಕ ಸೇರಿ 83 ಪದಕದೊಂದಿಗೆ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದಾರೆ.

ಎರಡು ನೂತನ ಕೂಟ ದಾಖಲೆ ಮಾಡುವ ಮೂಲಕ 14 ವರ್ಷ ವಯೋಮಿತಿಯ ಬಾಲಕರ ತಂಡ ಪ್ರಶಸ್ತಿ ಹಾಗೂ 17 ವರ್ಷ ವಯೋಮಿತಿ ಒಳಗಿನ ಬಾಲಕ-ಬಾಲಕಿಯರ ತಂಡ ಪ್ರಶಸ್ತಿ, ಜತೆಗೆ 14 ವರ್ಷ ವಯೋಮಿತಿಯ ಬಾಲಕ-ಬಾಲಕಿಯರು ಹಾಗೂ 17 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಸುಭಾಷ್ ಎ.ಆರ್. ಹಾಗೂ 17 ವರ್ಷ ವಯೋಮಿತಿಯ ಬಾಲಕ ವಿಭಾಗದಲ್ಲಿ ಆಳ್ವಾಸ್‌ನ ಸಂತೋಷ್ ಜಿ.ಶಹಪುರ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ. ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.