ಫಾ.ಮೆಲ್ವಿನ್ ಪಿಂಟೋ 
ದಕ್ಷಿಣ ಕನ್ನಡ

ಅಲೋಶಿಯಸ್ ವಿವಿ ಪ್ರೋ ಚಾನ್ಸ್‌ಲರ್ ಫಾ.ಮೆಲ್ವಿನ್ ಪಿಂಟೋ ನಿಧನ

ಮಂಗಳೂರು: ನಗರದ ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರೋ-ಚಾನ್ಸ್‌ಲರ್ ಫಾ.ಮೆಲ್ವಿನ್ ಜೆ ಪಿಂಟೋ (63) ಅವರು ಶುಕ್ರವಾರ ನಿಧನರಾದರು.
1963ರಲ್ಲಿ ಜನಿಸಿದ ಫಾ.ಮೆಲ್ವಿನ್ ಪಿಂಟೋ ಅವರು ತಮ್ಮ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಸೇಂಟ್ ಅಲೋಶಿಯಸ್ ಸಂಸ್ಥೆಯಲ್ಲಿ ಪೂರ್ಣಗೊಳಿಸಿ, 1981ರಲ್ಲಿ ಜೆಸ್ಯೂಟ್‌ಗೆ ಸೇರ್ಪಡೆಯಾಗಿದ್ದರು. 1997ರಲ್ಲಿ ಯಾಜಕ ಪದವಿ ಸ್ವೀಕರಿಸಿದ ಅವರು, ಹಾಸನದ ಸೆಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಸೆಂಟ್ ಜೋಸೆಫ್ ಇಂಡಿಯನ್ ಪಿಯು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ 2007ರವರೆಗೆ ಕಾರ್ಯನಿರ್ವಹಿಸಿದರು.
ಮಂಗಳೂರಿನ ಸೈಂಟ್ ಅಲೋಶಿಯಸ್ ಹೈಸ್ಕೂಲ್ ಹಾಗೂ ಹಾಸನದ ಪಿಯು ಕಾಲೇಜುಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ವ್ಯಾಟಿಕನ್ ಕಮ್ಯುನಿಕೇಷನ್ಸ್ ಮತ್ತು ರೋಮ್‌ನ ವ್ಯಾಟಿಕನ್ ರೇಡಿಯೋದ ಏಷ್ಯಾ ಹಾಗೂ ಭಾರತೀಯ ಭಾಷೆಗಳ ಇಂಗ್ಲೀಷ್ ವಿಭಾಗದಲ್ಲಿ ಕೆಲಸ ಮಾಡಿದ್ದರು.
ಮಂಗಳೂರಿನ ಫಾತಿಮಾ ರೆಟ್ರಿಟ್ ಹೌಸ್‌ನ ನಿರ್ದೇಶಕರಾಗಿ ಮತ್ತು ಧಾರವಾಡದ ವಿದ್ಯಾನಿಕೇತನದ ಜೆಸ್ಯೂಟ್ ಅಧ್ಯಯನ ಕೇಂದ್ರದ ಸುಪೀರಿಯರ್ ಆಗಿ ಸೇವೆ ಸಲ್ಲಿಸಿದ್ದರು.
ಫಾ.ಮೆಲ್ವಿನ್ ಪಿಂಟೋ ಅವರು ಬುದ್ಧಿವಂತಿಕೆ, ಸರಳತೆ ಮತ್ತು ವಿನಯಶೀಲತೆಯಿಂದ ಹೆಸರುವಾಸಿಯಾಗಿದ್ದರು. ವಿದ್ಯಾರ್ಥಿಗಳೊಂದಿಗೆ ಹತ್ತಿರದ ಸಂಬಂಧ ಬೆಳೆಸಿಕೊಂಡು, ಮಾರ್ಗದರ್ಶನ ನೀಡುತ್ತಿದ್ದರು.