ಮಂಗಳೂರು: ಮೃತ ತಂದೆಯನ್ನು ತರಾತುರಿಯಲ್ಲಿ ಚರ್ಚ್‌ಗೆ ಕೊಂಡೊಯ್ದು ದಫನ ಮಾಡಿರುವುದು ಬೆಳಕಿಗೆ ಬಂದಿದ್ದು, ಆಸ್ತಿ ವಿಚಾರಕ್ಕೆ ಪುತ್ರಿಯೇ ತಂದೆಯನ್ನು ಕೊಲೆಗೈದ ಆರೋಪ ವ್ಯಕ್ತವಾಗಿದೆ. ಘಟನೆ ನಡೆದು ಎರಡು ತಿಂಗಳ ಬಳಿಕ ಚರ್ಚ್‌ನ ದಫನ ಭೂಮಿಯಿಂದ ಪೊಲೀಸರು ತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಮಂಗಳೂರು ನಗರದ ಕೊಟ್ಟಾರ ಮೊದಲ ಅಡ್ಡ ರಸ್ತೆ ನಿವಾಸಿ ಆಲ್ಬರ್ಟ್ ರೇಗೊ ಎಂಬವರು ಜು.19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಸ್ಥಳೀಯರಿಗೆ ಹಾಗೂ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಜೊತೆಗಿದ್ದ ಪುತ್ರಿ ಮಾಯಾ ರೇಗೊ ತನ್ನ ಆಪ್ತರ ಮೂಲಕ ಶವದ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ಅಂತ್ಯಕ್ರಿಯೆ ನಡೆಸಿದ್ದರು. ಇದರಿಂದ ಸಂಶಯಗೊಂಡ ಆಲ್ಬರ್ಟ್ ರೇಗೊ ಅವರ ಸ್ನೇಹಿತರಾದ ಹೆರಾಲ್ಡ್ ಪಿರೇರಾ ಅವರು ಉರ್ವಾ ಠಾಣೆಗೆ ಇದೊಂದು ಕೊಲೆ ಎಂದು ಸಂಶಯ ವ್ಯಕ್ತಪಡಿಸಿ ಅ.5ರಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಯಾ ರೇಗೊ ಹಾಗೂ ಇತರರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸರು ಹಲವು ಸಾಕ್ಷೃಗಳನ್ನು ಸಂಗ್ರಹಿಸಿ, ಸಂಶಯಾಸ್ಪದವಾಗಿ ಮೃತಪಟ್ಟ ಆಲ್ಬರ್ಟ್ ರೇಗೊ ಅವರ ಶವವನ್ನು ಕುಂಟಿಕಾನ ಬಳಿಯ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಿಂದ ಅಗೆದು ಅಸ್ಥಿಪಂಜರ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಆಲ್ಭರ್ಟ್ ರೇಗೊ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸಾಕಷ್ಟು ಆಸ್ತಿ ಮಾಡಿಕೊಂಡಿದ್ದರು. ಅವರ ಇನ್ನಿಬ್ಬರು ಮಕ್ಕಳು ಬೇರೆ ಕಡೆ ವಾಸಿಸುತ್ತಿದ್ದಾರೆ. ಒಬ್ಬಳು ಮಗಳು ಮಾತ್ರ ಜತೆಗಿದ್ದು, ಆಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದನ್ನು ತನ್ನ ಸ್ನೇಹಿತರಿಗೆ ಆಲ್ಭರ್ಟ್ ಹೇಳುತ್ತಿದ್ದರು. ಅಲ್ಲದೆ ಬಲವಂತದಿಂದ ವೀಲು ನಾಮೆ ಬರೆಸಿಕೊಂಡಿದ್ದನ್ನು ಹೇಳಿದ್ದರು. ತನಗೇನಾದರೂ ಆದರೆ ಆಕೆಯ ಕಿರುಕುಳವೇ ಕಾರಣ. ನಿರಂತರ ಹಲ್ಲೆಗೈದು ಕಿರುಕುಳ ನೀಡುತ್ತಿದ್ದ ಬಗ್ಗೆ ಆಲ್ಬರ್ಟ್ ರೇಗೊ ಹೇಳಿಕೊಂಡಿದ್ದಾಗಿ ಹೆರಾಲ್ಡ್ ಪಿರೇರಾ ದೂರಿನಲ್ಲಿ ತಿಳಿಸಿದ್ದಾರೆ. ಪುತ್ರಿ ಹಲ್ಲೆ ನಡೆಸುತ್ತಿರುವ ವಿಚಾರ ಅವರ ಇನ್ನಿಬ್ಬರು ಮಕ್ಕಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.
ಆಲ್ಬರ್ಟ್ ಆರೋಗ್ಯವಂತರಾಗಿದ್ದು, ಯಾವುದೇ ಕಾಯಿಲೆಯೂ ಇರಲಿಲ್ಲ. ಮಗಳು ಮಾಯಾ ರೇಗೋ ಆಸ್ತಿಗಾಗಿ ಮಾನಸಿಕ ಕಿರುಕುಳ ನೀಡಿ, ದೈಹಿಕ ಹಲ್ಲೆ ಮಾಡಿ ಅಥವಾ ಆಹಾರದಲ್ಲಿ ಯಾವುದೋ ವಿಷಮಿಶ್ರಣ ಮಾಡಿಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರೊಬ್ಬರು ಮತ್ತು ಪೊಲೀಸ್ ಸಿಬಂದಿಯೊಬ್ಬರು ಕೂಡಾ ಶಾಮೀಲಾಗಿದ್ದಾರೆ. ಮನೆಗೆ ಹತ್ತಿರದಲ್ಲೇ ಖಾಸಗಿ ಆಸ್ಪತ್ರೆಯೊಂದು ಇದ್ದರೂ, ಅಲ್ಲಿಗೆ ಕರೆದೊಯ್ಯದೆ ದೂರದ ಬೋಂದೆಲ್‌ನ ಆಸ್ಪತ್ರೆಗೆ ಕರೆದೊಯ್ದು ಡೆತ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಇದು ಕೂಡಾ ಅನುಮಾನಕ್ಕೆ ಕಾರಣವಾಗಿದೆ ಎಂದು ಮೃತರ ಆಪ್ತರು ಆರೋಪಿಸಿದ್ದಾರೆ.
ಎಫ್‌ಎಸ್‌ಎಲ್ ತಪಾಸಣಾ ವರದಿ ಮತ್ತು ಪೊಲೀಸ್ ತನಿಖೆ ಪೂರ್ಣಗೊಂಡ ಅನಂತರವಷ್ಟೇ ಆಲ್ಬರ್ಟ್ ರೇಗೋ ಅವರ ಸಾವಿಗೆ ನಿಖರ ಕಾರಣ ಹಾಗೂ ಪ್ರಕರಣದ ನೈಜ ಸತ್ಯಾಂಶ ಬೆಳಕಿಗೆ ಬರಲಿದೆ.
ಕೊಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಳಿಕ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ.
ಸುಧೀರ್ ಕುಮಾರ್ ರೆಡ್ಡಿ, ನಗರ ಪೊಲೀಸ್ ಆಯುಕ್ತ