ಅಳದಂಗಡಿ ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರೋತ್ಸವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪರೋಪಕಾರದ ಗುಣ ನಮ್ಮಲ್ಲಿದ್ದರೆ ಅದುವೇ ದೊಡ್ಡ ಆಸ್ತಿ. ಸತ್ಕರ್ಮಕ್ಕೆ ಸತ್ಪಲ, ದುಷ್ಕರ್ಮಕ್ಕೆ ದುಷ್ಪಲ. ಇದು ಲೋಕ ನಿಯಮ. ಹೀಗಾಗಿ ಧರ್ಮಪಥದಲ್ಲಿ ಜೀವನ ಸಾಗಿಸಿದರೆ ನಾವು ಎಲ್ಲಿ ತಲುಪಬೇಕೋ ಅಲ್ಲಿಗೇ ತಲುಪುತ್ತೇವೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅಳದಂಗಡಿ ಶ್ರೀ ಸೋಮನಾಥೇಶ್ವರಿ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು. ಸತ್ಯದೇವತಾ ದೈವಸ್ಥಾನ ಆಡಳ್ತೆದಾರ ಶಿವಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದ್ದರು.
ಸತೀಶ ದೇವಾಡಿಗ, ಸತೀಶ್ ಕಾಶಿಪಟ್ಣ, ಪೂವಪ್ಪ ಮಡಿವಾಳ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಗುರುವಾಯನಕೆರೆ, ಅಳದಂಗಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ, ಉದ್ಯಮಿಗಳಾದ ದೇವೇಂದ್ರ ಹೆಗ್ಡೆ, ಪುಷ್ಪರಾಜ ದೇವಾಡಿಗ ಉಪಸ್ಥಿತರಿದ್ದರು. ವಿಜಯಕುಮಾರ್ ಜೈನ್, ಶಿಕ್ಷಕಿ ಮಂಗಳಾ, ಮನೋಹರ್ ಸನ್ಮಾನಿತರ ಪರಿಚಯ ನೀಡಿದರು. ನಿತ್ಯಾನಂದ ಶೆಟ್ಟಿ ನೊಚ್ಚ ನಿರೂಪಿಸಿದರು. ಡಾ.ಪ್ರತೀತ್ ಜೈನ್ ವಂದಿಸಿದರು.
ಧಾರ್ಮಿಕ ವಿಧಿವಿಧಾನ, ಸಾಂಸ್ಕೃತಿಕ ವೈಭವ
20ರಂದು ದೇಗುಲದಲ್ಲಿ ಆನುವಂಶಿಯ ಆಡಳಿತ ಮೊಕ್ತೇಸರ ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಬೆಳಗ್ಗೆ ಪ್ರಾರ್ಥನೆ, ಕವಾಟೋದ್ಘಾಟನೆ, ದಿವ್ಯದರ್ಶನ, ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಚಂದ್ರ ಮಂಡಲ ಉತ್ಸವ, ಮಹಾಪೂಜೆ, ಶ್ರೀ ದೇವರ ಬಲಿ, ಹಣ್ಣುಕಾಯಿ, ಪ್ರಸಾದ ವಿತರಣೆ, ಸಂಜೆ ಭಜನೆ, ಶ್ರೀ ದೇವರ ಮಹೋತ್ಸವ, ವಸಂತ ಕಟ್ಟೆ ಪೂಜೆ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಶ್ರೀ ಕೊಡಮಣಿತ್ತಾಯ ದೈವದ ನೇಮ, ದೈವದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ ನೆರವೇರಿತು.
ರಾತ್ರಿ ಶ್ರೀ ಹರಿದಾಸ ಡೋಗ್ರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಬಳಿಕ ಅಳದಂಗಡಿ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಹಾಗೂ ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.