ಮಂಗಳೂರು ಧರ್ಮಕ್ಷೇತ್ರಕ್ಕೆ ಐವರು ನೂತನ ಯಾಜಕರು ಗುರುವಾರ ಕುಲಶೇಖರ ಚರ್ಚ್‌ನಲ್ಲಿ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಯಾಜಕ ದೀಕ್ಷೆ ಪಡೆದರು.  
ದಕ್ಷಿಣ ಕನ್ನಡ

ಮಂಗಳೂರು ಧರ್ಮಕ್ಷೇತ್ರಕ್ಕೆ ಐವರು ನೂತನ ಯಾಜಕರ ಸೇರ್ಪಡೆ

ಮಂಗಳೂರು: ಮಂಗಳೂರು ಧರ್ಮಕ್ಷೇತ್ರಕ್ಕೆ ಐವರು ನೂತನ ಯಾಜಕರು ಗುರುವಾರ ಕುಲಶೇಖರ ಚರ್ಚ್‌ನಲ್ಲಿ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಯಾಜಕ ದೀಕ್ಷೆ ಪಡೆದರು.
ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ನಿವಾಸಿ ವಂ.ಅವಿಲ್ ಸಂತಮಯೋರ್, ನೈನಾಡ್ ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್‌ನ ವಂ.ಡೆನ್ಜಿಲ್ ರೊಡ್ರಿಗಸ್, ಬೇಳಾ ಚರ್ಚ್‌ನ ವಂ.ಜೀವನ್ ಡಿಸೋಜ, ಕುಲಶೇಖರ ಚರ್ಚ್‌ನ ವಂ.ಜೋಯಲ್ ಮೊಂಟೇರೊ, ಮಡಂತ್ಯಾರು ಚರ್ಚ್‌ನ ವಂ.ಲಾಯ್ಡ ರೋಹನ್ ಡಿಸೋಜ ಯಾಜಕ ದೀಕ್ಷೆ ಪಡೆದವರು.
ಈ ಸಂಭ್ರಮದ ಬಲಿಪೂಜೆಯಲ್ಲಿ ಧರ್ಮಕ್ಷೇತ್ರದ ಶ್ರೇಷ್ಠ ಗುರುಗಳಾದ ವಂ. ಮ್ಯಾಕ್ಸಿಮ್ ಎಲ್. ನೊರೊನ್ಹಾ, ಧಾರ್ಮಿಕರ ಪಾಲನಾ ವಿಕಾರ್ ವಂ.ಡಾ.ಡೇನಿಯಲ್ ವೀಗಾಸ್, ಜಪ್ಪು ಸೆಮಿನರಿಯ ರೆಕ್ಟರ್ ವಂ.ಡಾ.ರಾಜೇಶ್ ರೊಸಾರಿಯೋ, ಜುಡಿಶಿಯಲ್ ವಿಕಾರ್ ವಂ.ನವೀನ್ ಪಿಂಟೋ, ಪಾಲನ ಕೇಂದ್ರದ ನಿರ್ದೇಶಕ ವಂ.ಸಂತೋಷ್ ರೊಡ್ರಿಗಸ್ ಮತ್ತು ಕುಲಶೇಖರ ಚರ್ಚ್‌ನ ಧರ್ಮಗುರು ವಂ. ಕ್ಲಿಫರ್ಡ್ ಫನಾರ್ಂಡಿಸ್ ಉಪಸ್ಥಿತರಿದ್ದರು. ನೂರಾರು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಪವಿತ್ರ ವಿಧಿಗೆ ಸಾಕ್ಷಿಯಾದರು.
ಬಿಷಪ್‌ರ ಪ್ರಬೋಧನೆ: ಯಾಜಕತ್ವವು ಕೇವಲ ಮಾನವ ಅರ್ಹತೆಯಲ್ಲ, ಬದಲಾಗಿ ಅದು ದೇವರ ಅಪಾರ ಪ್ರೀತಿಯಿಂದ ಬಂದ ದೈವಿಕ ಕೊಡುಗೆ ಮತ್ತು ರಹಸ್ಯ. ನೂತನ ಯಾಜಕರು ಸದಾ ಪ್ರಾರ್ಥನೆ ಮತ್ತು ದೇವರ ಕೃಪೆಯ ಮೇಲೆ ಅವಲಂಬಿತರಾಗಿ ಸೇವೆ ಸಲ್ಲಿಸಬೇಕು. ಭಕ್ತಾದಿಗಳು ತಮ್ಮ ದೈನಂದಿನ ಜೀವನದಲ್ಲಿ ಯಾಜಕರಿಗೆ ಪ್ರಾರ್ಥನೆಯ ಬೆಂಬಲ ನೀಡಬೇಕೆಂದು ಎಂದು ಡಾ.ಪೀಟರ್ ಪೌಲ್ ಸಲ್ದಾನ ಅವರು ವಿನಂತಿಸಿದರು.
ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ವಂ. ರೋಹಿತ್ ಡಿಕೋಸ್ಟಾ ಮತ್ತು ಸೆಮಿನರಿ ವಿದ್ಯಾರ್ಥಿಗಳು ದಿವ್ಯ ಬಲಿಪೂಜೆಯ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ವಂ. ಕ್ಲಿಫರ್ಡ್ ಫನಾರ್ಂಡಿಸ್ ಸಮಾರಂಭದ ವ್ಯವಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸಿದರು.
ಸನ್ಮಾನ ಮತ್ತು ಕೃತಜ್ಞತೆ ಬಲಿಪೂಜೆಯ ನಂತರ ನಡೆದ ಕಿರು ಸನ್ಮಾನ ಕಾರ್ಯಕ್ರಮದಲ್ಲಿ ವಂ. ಫ್ಲೇವಿಯನ್ ಲೋಬೋ ಅವರು ನೂತನ ಯಾಜಕರನ್ನು ಮತ್ತು ಅವರ ಪೋಷಕರನ್ನು ಪರಿಚಯಿಸಿ ಗೌರವಿಸಿದರು. ಬಿಷಪ್ ಅವರು ಪ್ರತಿಯೊಬ್ಬ ನೂತನ ಯಾಜಕರನ್ನು ಅಭಿನಂದಿಸಿ, ಅವರ ಪೋಷಕರಿಗೆ ಹೂಗುಚ್ಛ ನೀಡಿ ಗೌರವಿಸಿದರು.
ನೂತನ ಯಾಜಕರ ಪರವಾಗಿ ವಂ. ಜೀವನ್ ಡಿಸೋಜ ಅವರು ಬಿಷಪ್, ತರಬೇತುದಾರರು, ಪೋಷಕರು ಮತ್ತು ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು.