ಮೂಡುಬಿದಿರೆ: ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸೇರಿದಂತೆ ವಿವಿಧ ಅವ್ಯವಸ್ಥೆಗಳು ಮುಂದುವರಿದಿರುವ ಕುರಿತು ‘ವಿಜಯವಾಣಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಕಾರ್ಯಾಲಯ, ಸಮಸ್ಯೆ ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಸೂಚಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಕಾರ್ಯಾಲಯದಿಂದ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. 2026ರ ಅ.4ರಂದು ಪ್ರಕಟವಾದ ಪಾರ್ಕಿಂಗ್ ಅವ್ಯವಸ್ಥೆಗಿಲ್ಲ ಪರಿಹಾರ ವರದಿಯಲ್ಲಿ, ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಪಾರ್ಕಿಂಗ್ ಸಮಸ್ಯೆ ಮುಂದುವರಿದಿದ್ದು, ಸಭೆಗಳು ಮತ್ತು ಸ್ಥಳ ಪರಿಶೀಲನೆಗಳ ಬಳಿಕ ನಿರೀಕ್ಷಿತ ಸುಧಾರಣೆ ಕಂಡು ಬಂದಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಪುರಸಭೆಯಿಂದ ನೋ ಪಾರ್ಕಿಂಗ್ ಗೆರೆ ಎಳೆದಿದ್ದರೂ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ ಎಂದು ವರದಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ, ನಿಯಮಾನುಸಾರ ತಕ್ಷಣ ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಸಚಿವಾಲಯ ಸೂಚಿಸಿದೆ.
ಇದಕ್ಕೆ ಸಂಬಂಧಿಸಿ ಮೂಡುಬಿದಿರೆ ಪುರಸಭೆ ಅ.22ರಂದು ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದು ಕೈಗೊಂಡ ಕ್ರಮಗಳ ವಿವರ ನೀಡಿದೆ. ಆ.27ರಂದು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಕುರಿತು ಚರ್ಚಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಇತರ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸೆ.1ರಂದು ಪೊಲೀಸ್ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆ ಸುಧಾರಣೆ ಕುರಿತು ಚರ್ಚಿಸಲಾಗಿತ್ತು.
ಪುರಸಭೆ ವ್ಯಾಪ್ತಿಯ 10 ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು, ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗಸೂಚಿ ಫಲಕ ಅಳವಡಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಅಪಘಾತ ತಡೆಗಟ್ಟಲು ಅಗತ್ಯವಿರುವ ಕಡೆ ಸಂಚಾರ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಸೆ.2ರಿಂದ ಬಸ್ ನಿಲ್ದಾಣದಲ್ಲಿ ಬಸ್ಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದು, ಬಸ್ ನಿಲುಗಡೆ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಬಸ್ಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ. ಬಸ್ ನಿಲ್ದಾಣದ ಬಳಭಾಗದಲ್ಲಿ ಇಂಟರ್ಲಾಕ್ ಅಳವಡಿಕೆ ಕೈಗೊಂಡಿರುವುದಾಗಿ ಪುರಸಭೆ ವಿವರಿಸಿದೆ.