ವೇಲಾಯುಧನ್ 
ದಕ್ಷಿಣ ಕನ್ನಡ

ನಕಲಿ ಪಾಸ್ ಪೋರ್ಟ್ ಪ್ರಕರಣ ಶಿಕ್ಷೆಯಾಗಿ ತಲೆಮರೆಸಿಕೊಂಡ ಆರೋಪಿ ಸೆರೆ

ಮಂಗಳೂರು: ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ, 2020ರಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿಯವರ ನೇತೃತ್ವದ ತಂಡ ಬಂಧಿಸಿದೆ.

ಕಾಸರಗೋಡು ಜಿಲ್ಲೆಯ ಬೇವಿಂಜೆ ಗ್ರಾಮದ ವೇಲಾಯುಧನ್ (54) ಬಂಧಿತ ಆರೋಪಿ.

2010ರ ಜೂ.22ರಂದು ನಕಲಿ ಪಾಸ್ ಪೋರ್ಟ್ ಹೊಂದಿ ಬಜಪೆ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸಿದ್ದ. ವಿಮಾನ ನಿಲ್ದಾಣದ ಆಗಿನ ಇಮಿಗ್ರೇಷನ್ ಅಧಿಕಾರಿ ಕೆ.ಎಂ ಚಂದ್ರಶೇಖರ್ ಅವರು ಆತನನ್ನು ವಶಕ್ಕೆ ಪಡೆದು, ಬಜಪೆ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ತನಿಖಾಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು 2020ರ ಡಿ.1ರಂದು ಆತನಿಗೆ ಒಂದು ವರ್ಷ 6 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು.

ಅನಂತರ ಆರೋಪಿ ವೇಲಾಯುಧನ್ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಕ್ರಿಮಿನಲ್ ರಿವಿಜನ್ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಆತನ ಮನವಿ ತಿರಸ್ಕರಿಸಿತ್ತು. ಅನಂತರ ವೇಲಾಯುಧನ್ ಪೊಲೀಸ್ ದಸ್ತಗಿರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ.

ಅ.8ರಂದು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಮುಂದಿನ ಕ್ರಮಕ್ಕಾಗಿ ಬಜಪೆ ಠಾಣೆಗೆ ಹಸ್ತಾಂತರಿಸಲಾಗಿದೆ.