ಕಾಣಿಕೆ ಹುಂಡಿ ಕಳವು ಮಾಡಿದ ಆರೋಪಿ ಸುಖೇಶ್ ನಾಯ್ಕ. 
ದಕ್ಷಿಣ ಕನ್ನಡ

ಕೊಡಿಪಾಡಿ ಕಾಣಿಕೆ ಹುಂಡಿ ಕಳವು ಆರೋಪಿ ಬಂಧನ

ಮಂಗಳೂರು: ಮಧ್ಯ ಕೊಡಿಪಾಡಿಯ ಕೋರ್ದಬ್ಬು ದೈವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳವು ಮಾಡಿದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆ ಕುಕ್ಕಿಹಳ್ಳಿ ಗ್ರಾಮದ ಬೆಲ್ಲಪ್ಪಳ್ಳಿ ಸುಖೇಶ್ ನಾಯ್ಕ (40) ಬಂಧಿತ. ಆಗಸ್ಟ್ 5ರಂದು ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಕಳ್ಳತನ ನಡೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಕಬ್ಬಿಣದ ಆಯುಧದಿಂದ ದೈವಸ್ಥಾನದ ಬಾಗಿಲು ಹಾಗೂ ಕಿಟಕಿಯನ್ನು ಮುರಿದು ಒಳನುಗ್ಗಿ ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಹುಂಡಿಯಲ್ಲಿದ್ದ ಸುಮಾರು 15 ಸಾವಿರ ರೂ. ನಗದು ಹಣ ಕಳವಾಗಿರುವುದು ತನಿಖೆಯಿಂದ ತಿಳಿದುಬಂದಿತ್ತು.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು. ಆರೋಪಿಯ ಪತ್ತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆ.10ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.
ವಿಚಾರಣೆ ವೇಳೆ ಆರೋಪಿ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಮಂಗಳವಾರ ಮಂಗಳೂರು ನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
18 ಪ್ರಕರಣ:
ತನಿಖೆಯಲ್ಲಿ ಆರೋಪಿಯ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿರುವುದೂ ತಿಳಿದು ಬಂದಿದೆ. ಅಲ್ಲದೆ, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್‌ಗಳು ಇರುವುದೂ ಪತ್ತೆಯಾಗಿದೆ.