ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ವಿಖ್ಯಾತ್ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ನ್ಯಾಯಾಂಗ ಬಂಧನ

ಮಂಗಳೂರು: ನಗರದ ಲಾಲ್‌ಬಾಗ್ ಜಂಕ್ಷನ್ ಬಳಿ ಸಿಗ್ನಲ್ ನಲ್ಲಿ ರೌಡಿಶೀಟರ್, ಡ್ರಗ್ ಪೆಡ್ಲರ್ ವಿಖ್ಯಾತ್ ಅಲಿಯಾಸ್ ವಿಕ್ಕಿ ಬಪ್ಪಾಲ್ (32) ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಹತ್ಯೆ ಮಾಡಲು ಯತ್ನಿಸಿ ಪರಾರಿಯಾಗಿದ್ದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರಿನ ಉರ್ವ ಸ್ಟೋರ್ ಮೂಲದ, ಮಣಿಪಾಲ ಬಡಗಬೆಟ್ಟುವಿನಲ್ಲಿ ವಾಸವಿದ್ದ ರೀತೇಶ್ ಸುವರ್ಣ ಅಲಿಯಾಸ್ ರೀತೇಶ್ (27) ಪ್ರಕರಣದ ಆರೋಪಿ. ಹಲ್ಲೆಗೊಳಗಾಗಿದ್ದ ವಿಕ್ಕಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ.
ಜು.25ರಂದು ಮಧ್ಯಾಹ್ನ 1.45ರ ವೇಳೆಗೆ ಲಾಲ್ ಬಾಗ್ ಸಿಗ್ನಲ್ ನಲ್ಲಿ ಸ್ಕೂಟರ್ ನಲ್ಲಿದ್ದ ವಿಕ್ಕಿ ಬಪ್ಪಾಲ್ ಮೇಲೆ ರಿತೇಶ್ ಸುವರ್ಣ ಮಚ್ಚಿನಿಂದ ಕುತ್ತಿಗೆಗೆ ಮಾರಾಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿಕ್ಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಸ್ಥಳದಿಂದ ಪರಾರಿಯಾಗಿ, ತಲೆ ಮರೆಸಿಕೊಂಡಿದ್ದ ರೀತೇಶ್, ಜು.27ರಂದು ಉಡುಪಿಯಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದ.
ರೀತೇಶ್ ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಇನ್ನೊಂದು ಪ್ರಕರಣದಲ್ಲಿಯೂ ಆರೋಪಿಯಾಗಿದ್ದ. ಜು.9ರಂದು ರೀತೇಶ್ ಮತ್ತು ಆತನ ಪತ್ನಿ ತಾವು ವಾಸವಾಗಿದ್ದ ಫ್ಲ್ಯಾಟ್ ನ ಪಕ್ಕದ ಇನ್ನೊಂದು ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ವ್ಯಕ್ತಿಯ ಕಣ್ಣಿಗೆ ತೀವ್ರ ಹಾನಿಯಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿ ನೀಡಿದ ದೂರಿನಂತೆ ಇಬ್ಬರ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ರೀತೇಶ್ ನ ಹೆಂಡತಿಯನ್ನು ಬಂಧಿಸಿದ್ದು, ರೀತೇಶ್ ತಲೆ ಮರೆಸಿಕೊಂಡಿದ್ದ.
ಎರಡೆರಡು ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನ್ನನ್ನು ಹಿಡಿದರೆ ಅಪಾಯ ಎಂದು ಅರಿತ ಆತ ನ್ಯಾಯಾಲಯಕ್ಕೆ ಶರಣಾಗಿದ್ದ, ಬಳಿಕ ಆ ಪ್ರಕರಣದಲ್ಲಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.
ಬಳಿಕ ಬರ್ಕೆ ಠಾಣೆ ಪೊಲೀಸರು ಆತನನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಕ್ಕಿ ಮತ್ತು ರೀತೇಶ್ ನಡುವೆ ವೈಮನಸ್ಸಿತ್ತು. 2019ರಲ್ಲಿ ವಿಕ್ಕಿ ಹಾಗೂ ಆತನ ತಂಡದವರು ಲೇಡಿಹಿಲ್ ನಲ್ಲಿ ರೀತೇಶ್ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದರು. ಇದಕ್ಕೆ ಪ್ರತಿಕಾರವಾಗಿ ವಿಕ್ಕಿಯನ್ನು ಹತ್ಯೆ ಮಾಡಲು ರೀತೇಶ್ ಉದ್ದೇಶಿಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.