ಮಂಗಳೂರು: ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವ ಆರೋಪದ ಮೇಲೆ ಒಬ್ಬನನ್ನು ಬಂಧಿಸಿ ಆತನಿಂದ 2.94ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುತ್ತೂರು ಪಡ್ನೂರ್ ಪಡ್ಡಾಯೂರ್ ಹೌಸ್ ನಿವಾಸಿ ಮೊಹಮ್ಮದ್ ನಿಸಾರ್ (23) ಪ್ರಕರಣದ ಆರೋಪಿ.
ನ.5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಆರೋಪಿ ಗಾಂಜಾವನ್ನು ಮಾರಾಟ ಮಾಡಲು ತಂದಿರುವ ಬಗ್ಗೆ ಮಾಹಿತಿ ಪಡೆದ ಉತ್ತರ ಉಪ ವಿಭಾಗದ ಎಸಿಪಿ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ. ಆರೋಪಿಯಿಂದ ಸುಮಾರು 1.90ಲಕ್ಷ ರೂ. ಮೌಲ್ಯದ 3.800ಕೆ.ಜಿ. ಗಾಂಜಾ, ಮೊಬೈಲ್ ೆನ್ ಹಾಗೂ ಕಾರು ಸೇರಿದಂತೆ ಒಟ್ಟು 2.94ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಗಾಂಜಾವನ್ನು ಸುರತ್ಕಲ್, ಪಣಂಬೂರು, ಕಾವೂರು ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದ್ದು, ಈ ಹಿಂದೆ ಕೂಡಾ ಹಲವು ಬಾರಿ ಗಾಂಜಾವನ್ನು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.