ಕಾರು ಅಪಘಾತ  
ದಕ್ಷಿಣ ಕನ್ನಡ

ಅಪಘಾತ ಗಾಯಾಳು ವಿಧಿವಶ

ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ದುರ್ಘಟನೆ

ಕೊಕ್ಕಡ: ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಬಣಕಲ್ ಸಮೀಪ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಶಿಶಿಲ ಗ್ರಾಮದ ಮಂತಾಜೆ ನಿವಾಸಿ ದೀಪೇಶ್ (27) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕ ಮದ್ಯಪಾನ ಮಾಡಿದ್ದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರೂ ಎಫ್‌ಐಆರ್‌ನಲ್ಲಿ ದಾಖಲಿಸದೆ ಪ್ರಕರಣವನ್ನು ದಾರಿ ತಪ್ಪಿಸಲು ಯತ್ನಿಸಲಾಗಿದೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.

ಸೆ.29ರಂದು ಶಿಶಿಲದ ರಘು (32), ಶಿಶಿಲ ಗ್ರಾಪಂ ಮಾಜಿ ಅಧ್ಯಕ್ಷ ಸುಧೀನ್, ಸತೀಶ, ದೀಪೇಶ್, ದೀಪಕ್ ಅಲಿಯಾಸ್ ತಿರುಮಲೇಶ್ವರ ಹಾಗೂ ಶೋಭಿತ್ ಅಲಿಯಾಸ್ ನಾಗರಾಜ್ ಮಂತ್ರಾಲಯಕ್ಕೆ ಹೊರಟಿದ್ದರು. ನಸುಕಿನ ಸುಮಾರು 3.40ಕ್ಕೆ ಸಬ್ಬೇನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮೂಡಿಗೆರೆ ಕಡೆಯಿಂದ ಬಂದ ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದೆ.

ಹಿಂಬದಿಯಲ್ಲಿ ಕುಳಿತಿದ್ದ ದೀಪೇಶ್ ಕುತ್ತಿಗೆಗೆ ಹಾಗೂ ಸುಧೀನ್ ಎಡಭುಜಕ್ಕೆ ಪೆಟ್ಟಾಗಿರುವುದು ಕಂಡುಬಂದಿತ್ತು. ರಘು, ಸತೀಶ, ನಾಗರಾಜ್ ಹಾಗೂ ದೀಪಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ದೀಪೇಶ್ ಹಾಗೂ ಸುಧೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ದೀಪೇಶ್‌ರನ್ನು ವೈದ್ಯರ ಸಲಹೆಯಂತೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪೇಶ್ ಮೃತಪಟ್ಟಿದ್ದಾರೆ.

ದೀಪೇಶ್
ಕಾರು ಅಪಘಾತ