ರಸ್ತೆಯುದ್ದಕ್ಕೂ ಆಯಿಲ್ ಚೆಲ್ಲಿರುವುದು. 
ದಕ್ಷಿಣ ಕನ್ನಡ

ಫಿಶ್‌ಮೀಲ್ ಆಯಿಲ್ ಸೋರಿಕೆಯಿಂದ ಅಪಘಾತ

ಪ್ರಮುಖ ಮುಖ್ಯಾಂಶಗಳು

  • ದ್ವಿಚಕ್ರ ವಾಹನಗಳು ಮಗುಚಿ ಸವಾರರಿಗೆ ಗಂಭೀರ ಗಾಯ
  • ಕ್ಯಾಂಟರ್‌ನಲ್ಲಿ ತಾಂತ್ರಿಕ ದೋಷ
ಉಳ್ಳಾಲ: ರಾಜ ರಸ್ತೆಯಲ್ಲಿ ಫಿಶ್‌ಮೀಲ್ ಆಯಿಲ್ ಸೋರಿಕೆಯಾಗಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿ ಉಳ್ಳಾಲದಲ್ಲಿ ಹಲವರಿಗೆ ಗಾಯಗೊಂಡಿದೆ. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ.ಖಾದರ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಕೋಟೆಪುರ ಫಿಶ್‌ಮೀಲ್‌ನಿಂದ ಮಂಗಳೂರು ಬಂದರಿಗೆ ಗುರುವಾರ ರಾತ್ರಿ ಆಯಿಲ್ ಸಾಗಿಸುತ್ತಿದ್ದ ಬೃಹತ್ ಕ್ಯಾಂಟರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಉಳ್ಳಾಲಬೈಲ್‌ವರೆಗಿನ ರಾಜ ರಸ್ತೆಯಲ್ಲೇ ಭಾರಿ ಪ್ರಮಾಣದ ಆಯಿಲ್ ಸೋರಿಕೆಯಾಗಿತ್ತು. ಇದರ ಪರಿಣಾಮ ಹಲವು ದ್ವಿಚಕ್ರ ವಾಹನಗಳು ಮಗುಚಿ ಬಿದ್ದಿದೆ. ಸವಾರರು ಗಂಭೀರ ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆಯಿಲ್ ಸಾಗಿಸುತ್ತಿದ್ದ ಕ್ಯಾಂಟರನ್ನು ಉಳ್ಳಾಲಬೈಲ್‌ನಲ್ಲಿ ತಡೆದು ಪ್ರತಿಭಟನೆ ನಡೆಸಿದ್ದರು.
ರಸ್ತೆಯುದ್ದಕ್ಕೂ ಆಯಿಲ್ ಸೋರಿಕೆ ಆಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಬ್ಬಕ್ಕ ವೃತ್ತದಿಂದ ಉಳ್ಳಾಲಬೈಲ್‌ವರೆಗೆ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸ್ಥಳೀಯರು ಮರದ ಮಿಲ್‌ಗಳ ಗರಗಸದ ಹುಡಿ ರಸ್ತೆಗೆ ಚೆಲ್ಲಿ ಮುಂದಕ್ಕೆ ಅನಾಹುತ ಆಗದಂತೆ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿದ್ದರು. ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪ್ರಕರಣಕ್ಕೆ ಸಂಬಂಧಿಸಿದ ಕಂಟೈನರ್, ಫಿಶ್‌ಮೀಲ್ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯು.ಟಿ.ಖಾದರ್ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಅಪಘಾತದಿಂದ ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಕಂಟೈನರ್‌ಗೆ ಸಂಬಂಧಿಸಿದ ಕಾರ್ಖಾನೆ ಮಾಲೀಕರು ಭರಿಸಬೇಕೆಂದು ಆದೇಶಿಸಿದ್ದಾರೆ.