ಮಂಗಳೂರು: ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಠೇವಣಿ ಮಾಡಿ ಬಳಿಕ ವಂಚನೆ ಮಾಡಿ ಪರಾರಿಯಾಗಿದ್ದ ಅಂತಾರಾಜ್ಯ ಆರೋಪಿಯನ್ನು ಎಂಟು ವರ್ಷಗಳ ಬಳಿಕ ಬಂದರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರದ ಓಂಗಲ್ ಎನ್ ಜಿಒ ಕಾಲನಿ ನಿವಾಸಿ, ಪ್ರಸ್ತುತ ನೆಲ್ಲೂರು ಗೋಮತಿ ನಗರದಲ್ಲಿ ವಾಸವಾಗಿದ್ದ ಲಕ್ಕು ಕೊಂಡಾ ರೆಡ್ಡಿ (46) ಬಂಧಿತ ಆರೋಪಿ.
ಮೈಥ್ರಿ ಪ್ಲಾಂಟೇಶನ್ ಆ್ಯಂಡ್ ಹಾರ್ಟಿಕಲ್ಚರ್ ಪ್ರೈ.ಲಿ. ಎನ್ನವ ಹೆಸರಿನಲ್ಲಿ ಹಣ ಸಂಗ್ರಹಿಸಿ ಬಳಿಕ ವಂಚನೆ ಮಾಡಿದ್ದ. ಈ ಬಗ್ಗೆ 2015ರಲ್ಲಿ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ 2018ರಲ್ಲಿ ವಿಚಾರಣೆ ವೇಳೆ ಆರೋಪಿ ಲಕ್ಕು ಕೊಂಡಾ ರೆಡ್ಡಿ, ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೆ, ಪೊಲೀಸರಿಗೂ ಸಿಗದೆ ತಲೆ ಮರೆಸಿಕೊಂಡಿದ್ದ. ಹಾಗಾಗಿ ಆರೋಪಿತನ ಪತ್ತೆಗೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.
ಮಾ.5ರಂದು ಆರೋಪಿ ಲಕ್ಕು ಕೊಂಡಾ ರೆಡ್ಡಿಯನ್ನು ಬಂದರು ಠಾಣೆಯ ಪಿಎಸ್‌ಐ ನೇತೃತ್ವದ ತಂಡ ಆಂದ್ರ ಪ್ರದೇಶದ ನೆಲ್ಲೂರು ಎಂಬಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡಿ ಮಂಗಳೂರಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ವಿವಿಧ ಠಾಣೆಗಳಲ್ಲಿ 17 ಪ್ರಕರಣ
ಲಕ್ಕು ಕೊಂಡಾ ರೆಡ್ಡಿ ವಿರುದ್ಧ ರಾಜ್ಯದ ಹಾಗೂ ಆಂಧ್ರದ ವಿವಿಧ ಠಾಣೆಗಳಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ರಾಜ್ಯದ ಬೆಂಗಳೂರು, ಕೋಲಾರ, ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು, ಉಡುಪಿ, ವಿಜಯಪುರ, ಶಿವಮೊಗ್ಗ, ದೊಡ್ಡಬಳ್ಳಾಪುರ ಠಾಣೆಗಳಲ್ಲಿ 11 ಪ್ರಕರಣಗಳಿವೆ. ಆಂದ್ರದ ವಿವಿಧ ಠಾಣೆಗಳಲ್ಲಿ 6 ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.