ಸಹಕಾರ ಜಾಥಾದಲ್ಲಿ ವಿವಿಧ ಸ್ತಬ್ಧಚಿತ್ರಗಳು, ಡೊಳ್ಳು ಕುಣಿತ, ಚೆಂಡೆ ವಾದನ ಮೊದಲಾದುವುದ ಗಮನ ಸೆಳೆಯಿತು.  
ದಕ್ಷಿಣ ಕನ್ನಡ

ಅ.ಭಾ. 72ನೇ ಸಹಕಾರಿ ಸಪ್ತಾಹದ ಮೆರುಗು ಹೆಚ್ಚಿಸಿದ ಆಕರ್ಷಕ ಸಹಕಾರ ಮೆರವಣಿಗೆ

ಮಂಗಳೂರು: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ಡಾ.ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಅಖಿಲ ಭಾರತ 72ನೇ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಆಕರ್ಷಕ ಸಹಕಾರ ಜಾಥದಲ್ಲಿ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು ಗಮನ ಸೆಳೆಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್, ಸಹಕಾರಿ ಇಲಾಖೆ, ಉಭಯ ಜಿಲ್ಲೆಗಳ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್, ಎಲ್ಲ ವಿಧದ ಸಹಕಾರ ಸಂಘಗಳ ಸಹಯೋಗದಲ್ಲಿ ಕರಾವಳಿ ಉತ್ಸವ ಮೈದಾನಿನಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದ ಪೂರ್ವಭಾವಿಯಾಗಿ ನಗರದಲ್ಲಿ ಆಕರ್ಷಕ ಸಹಕಾರ ಜಾಥಾ ಹಮ್ಮಿಕೊಳ್ಳಲಾಯಿತು.
ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಬಳಿಯಿಂದ ಹೊರಟ ಜಾಥಾ ನವಭಾರತ ವೃತ್ತ , ಪಿವಿಎಸ್, ಎಂಜಿ ರಸ್ತೆಯಲ್ಲಿ ಸಾಗಿ ಪ್ರಧಾನ ಸಭಾ ಕಾರ್ಯಕ್ರಮ ಆಯೋಜನೆಯಾಗಿದ್ದ ಕರಾವಳಿ ಉತ್ಸವ ಮೈದಾನದ ವರೆಗೆ ಸಾಗಿತು. ಸ್ತಬ್ಧ ಚಿತ್ರಗಳೊಂದಿಗೆ ಸಹಕಾರಿಗಳು ಹೆಜ್ಜೆ ಹಾಕಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆವರಣದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕ, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ಜಾಥಕ್ಕೆ ಚಾಲನೆ ನೀಡಿದರು. ಶಾಸಕ ಡಿ.ವೇದವ್ಯಾಸ ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಬ್ಯಾಂಕ್ ನ ಪ್ರಮುಖರು, ಸಹಕಾರಿ ಯೂನಿಯನ್ ಅಧ್ಯಕ್ಷರು, ವಿವಿಧ ಸಹಕಾರ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.
50ಕ್ಕೂ ಅಧಿಕ ಸ್ತಬ್ಧಚಿತ್ರಗಳು
ಈ ಸಹಕಾರ ಮೆರವಣಿಗೆಯಲ್ಲಿ ಸಹಕಾರ ರಥ, ಘಟೋತ್ಕಜ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆಗಳು, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ಪುರುಷರ ಹಾಗೂ ಮಹಿಳೆಯರ ಡೊಳ್ಳು ಕುಣಿತ, ಮೊಳಹಳ್ಳಿ ಶಿವರಾವ್ ಸ್ತಬ್ಧಚಿತ್ರ, ಮಹಿಳೆಯರ ವೀರಗಾಸೆ, ಹೈನುಗಾರಿಕೆಯ ಸ್ತಬ್ಧಚಿತ್ರ, ಮೀನುಗಾರಿಕೆಯ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ಕೆ.ಎಂ.ಎಫ್. - ನಂದಿನಿ ಆನ್ ವ್ಹೀಲ್ ಸ್ತಬ್ಧಚಿತ್ರ, ಸುಗ್ಗಿ ಕುಣಿತ, ತುಳುನಾಡು ವೈಭವ ಸ್ತಬ್ಧಚಿತ್ರ, ನವೋದಯ ಪ್ರಚಾರ ವಾಹನ, ಪುರವಂತಿಗೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ, ಚೆಂಡೆ ವಾಹನ, ಸೋಮನ ಕುಣಿತ, ಪಟ್ಟದ ಕುಣಿತ, ಶಿವನ ಮೂರ್ತಿಯ ಸ್ತಬ್ಧಚಿತ್ರ, ನವೋದಯ ಗುಂಪಿನ ಸಭೆ ನಡೆಸುವ ಸ್ತಬ್ಧಚಿತ್ರ, ಗೊರವರ ಕುಣಿತ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ಉಳುಮೆ ಮಾಡುವ ರೈತನ ಸ್ತಬ್ಧಚಿತ್ರ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮೊಬೈಲ್ ಬ್ಯಾಂಕ್ ವಾಹನ ಸೇರಿದಂತೆ 50 ಕ್ಕೂ ಅಧಿಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಸಹಕಾರ ಬಂಧುಗಳು ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರು ಸೇರಿ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಕರಾವಳಿ ಉತ್ಸವ ಮೈದಾನ ತಲುಪಿದರು.