ಮಾದಕ ವಸ್ತು  
ದಕ್ಷಿಣ ಕನ್ನಡ

ಮಾದಕ ವಸ್ತು ಮಾರಾಟ ಒಟ್ಟು ಆರು ಆರೋಪಿಗಳ ಬಂಧನ

ಮಂಗಳೂರು: ನಗರದಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಟೇಶ್ವರ ನಿವಾಸಿ ಮೊಹಮ್ಮದ್ ಸಯ್ಯದ್ ಆಫ್ರಿದಿ (26), ಬಲ್ಮಠ ನಿವಾಸಿ ಮಕ್ಸೂದ್ ಸಾಗ್ (23), ಕೋಟೇಶ್ವರ ನಿವಾಸಿ ಅಹಮ್ಮದ್ ಅಲಿ ಅರ್ಷಾನ್ (22), ಕೊಟ್ಟಾಯಂ ನಿವಾಸಿ ೆಲಿಕ್ಸ್ ಪಿ. ಜೋಸ್ೆ (20), ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಕನಾಡಿ ನಿವಾಸಿ ಎಡಲ್ರೋಚ್ (33), ಮಲ್ಲಿಕಟ್ಟೆ ನಿವಾಸಿ ಆರೋನ್ ವಿಶಾಲ್ ಲಸ್ರಾದೋ (18) ಬಂಧಿತರು.
ಪಾಂಡೇಶ್ವರ ಠಾಣಾ ವ್ಯಾಪ್ತಿಯ ಬಂಧಿತ ಆರೋಪಿಗಳಿಂದ 60ಗ್ರಾಂ ಹೈಡ್ರೋವಿಡ್ ಗಾಂಜಾ, 1.155ಕೆ.ಜಿ. ಗಾಂಜಾ, ಸ್ವ್‌ಟಿ ಕಾರು ವಶಪಡಿಸಿಕೊಂಡರೆ, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿಗಳಿಂದ 53.87ಗ್ರಾಂ ಎಂಡಿಎಂಎ, ಹೈಡ್ರೋವಿಡ್ ಗಾಂಜಾ 103.20ಗ್ರಾಂ, ಎಂ.ಜಿ. ಹೆಕ್ಟೆರ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ಖರೀದಿಸಿ ತಂದು ನಗರದ ವಿವಿಧ ಕಡೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದರು. ಮುಂಬೈ ನಿವಾಸಿಯಾದ ಸಂದೀಪ್ ಶೆಟ್ಟಿ ದುಬೈನಲ್ಲಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿದ್ದು, ನಿಷೇಧಿತ ಮಾದಕ ವಸ್ತುವಾದ ಹೈಡ್ರೋ ವೀಡ್ ಗಾಂಜಾವನ್ನು ಬೆಂಗಳೂರಿಗೆ ವಿಮಾನದ ಮುಖಾಂತರ ಸಾಗಾಟ ಮಾಡುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಸಾಗಾಟ ಮಾಡಲು ಎಡಲ್ ರೋಚ್‌ನನ್ನು ನೇಮಕ ಮಾಡಿಕೊಂಡಿದ್ದ. ಎಡಲ್ ರೋಚ್‌ನು ವಿಮಾನ ನಿಲ್ದಾಣದಿಂದ ಹೈಡ್ರೋವೀಡ್ ಗಾಂಜಾವನ್ನು ಸಂದೀಪ್ ಶೆಟ್ಟಿ ಹೇಳಿದ ಸ್ಥಳಕ್ಕೆ ಸಾಗಿಸುವ ವ್ಯವಸ್ಥೆ ಮಾಡುತ್ತಿದ್ದನು.
ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಸ್ರಾದೋ ಅವರು ಮಕ್ಸೂದ್ ಸಾಗ್ ನ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ರವರಿಗೆ ಬೆಂಗಳೂರಿನಲ್ಲಿ ಮಾದಕ ವಸ್ತುವನ್ನು ಪೂರೈಸಿದ್ದರು. ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಬೆಂಗಳೂರಿನಿಂದ ಗಾಂಜಾ, ಹೈಡ್ರೋವಿಡ್ ಮತ್ತು ಎಂ.ಡಿ.ಎಂ.ಎ ನ್ನು ತಮ್ಮ ಎಂ.ಜಿ ಹೆಕ್ಟರ್ ವಾಹನದಲ್ಲಿ ತೆಗೆದುಕೊಂಡು ಬಂದಿದ್ದರು. ಮೊಹಮ್ಮದ್ ಸಯ್ಯದ್ ಆಫ್ರೀದಿ, ಮಕ್ಸೂದ್ ಸಾಗ್, ಅಹಮ್ಮದ್ ಅಲಿ ಅರ್ಷಾನ್, ಫೆಲಿಕ್ಸ್.ಪಿ.ಜೊಸೆಫ್ ಮಂಗಳೂರು ನಗರದ ಬದ್ರಿಯಾ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ರೂಮ್ ಪಡೆದು ಮಾದಕ ವಸ್ತುವನ್ನು ಯುವಕ ಯುವತಿಯರಿಗೆ ಮಾರಾಟ ಮಾಡುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ.
ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಸ್ರಾದೋ ಗ್ರೀನ್ ಪಾರ್ಕ್ ಮೈದಾನ ಬಂದರ್ ಬಳಿಯಲ್ಲಿ ಕಾರಿನಲ್ಲಿ ಕುಳಿತು ಮಾದಕ ವಸ್ತುವನ್ನು ಯುವಕ, ಯುವತಿಯರಿಗೆ ಮಾರಾಟ ಮಾಡುತ್ತಿರುವಾಗ ಆರೋಪಿತರನ್ನು ಬಂಧಿಸಲಾಗಿದೆ. ಮಂಗಳೂರು ಕೇಂದ್ರ ಉಪವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.