ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಪತ್ನಿಯ ಜತೆ ಮುನಿಸು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನೇಣಿಗೆ ಶರಣಾಗುತ್ತಿದ್ದ ತಂದೆ-ಮಗಳ ರಕ್ಷಣೆ

ಮಂಗಳೂರು: ಪತ್ನಿಯ ಜತೆ ಜಗಳವಾಗಿ ಪತಿ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಜತೆಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಲು ಹೋಗಿದ್ದು, ಬಳಿಕ ಮನೆಗೆ ಬಂದು ನೇಣು ಹಾಕಿಕೊಳ್ಳುತ್ತಿರುವಾಗ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ರಕ್ಷಣೆಗೊಳಗಾದ ಘಟನೆ ಕಾವೂರು ಅಂಬಿಕಾನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕಾವೂರು ಠಾಣಾ ವ್ಯಾಪ್ತಿಯ ಅಂಬಿಕಾ ನಗರ ನಿವಾಸಿ ರಾಜೇಶ್(35) ಮತ್ತು ಅವರ ಮಗಳು ರಕ್ಷಿಸಲ್ಪಟ್ಟವರು. ಈತ ಇತ್ತೀಚೆಗೆ ಪತ್ನಿಯ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಆಕೆಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಮಗಳೊಂದಿಗೆ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದ.
ಸೋಮವಾರ ಸಂಜೆ ತನ್ನ ಮಗಳನ್ನು ಕರೆದುಕೊಂಡು ತಣ್ಣೀರುಬಾವಿ ಬೀಚ್ ಗೆ ಹೋಗಿದ್ದು ‘ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿ ಇರಲಿ. ನಮಗೆ ಯಾರೂ ಬೇಡ ಎನ್ನುತ್ತ ನೀರಿನತ್ತ ನಡೆಯುವ ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ‘ಸಾಯೋದು ಬೇಡಪ್ಪಾ’ ಎಂದು ಮಗು ಹೇಳುವುದು ದಾಖಲಾಗಿದೆ.
ವಿಡಿಯೋವನ್ನು ತನ್ನ ಅಕ್ಕ ಮತ್ತು ಇತರ ಸಂಬಂಧಿಕರಿಗೂ ಹಾಕಿದ್ದಾನೆ. ವಿಡಿಯೋ ಕ್ಷಣಾರ್ಧದಲ್ಲಿ ವಾಟ್ಸಪ್ ನಲ್ಲಿ ಷೇರ್ ಆಗಿದ್ದು ಏಳು ಗಂಟೆ ವೇಳೆಗೆ ಪಣಂಬೂರು ಪೊಲೀಸರಿಗೆ ತಲುಪಿತ್ತು. ಆದರೆ ವಿಡಿಯೋದಲ್ಲಿ ಅವನ ಮುಖ ಇರಲಿಲ್ಲ. ಕೇವಲ ಸಮುದ್ರದ ನೀರಿನ ಕಡೆಗೆ ನಡೆಯುತ್ತಾ ಹೋಗುವುದು, ಅದರಲ್ಲಿ ತಂದೆ-ಮಗಳ ನೆರಳು ಮಾತ್ರ ಇತ್ತು. ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ಕೂಡಲೇ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಮಹಮ್ಮದ್ ಸಲೀಂ ವಿಡಿಯೋವನ್ನು ನೋಡಿ, ತಣ್ಣೀರುಬಾವಿ ಆಗಿರಬೇಕೆಂದು ಠಾಣೆಯಲ್ಲಿದ್ದ ಎಲ್ಲ ಸಿಬಂದಿಯನ್ನೂ ಹುಡುಕಲು ಕಳುಹಿಸಿದ್ದಾರೆ. ಅಲ್ಲಿ ಹುಡುಕಿದಾಗಲೂ ಯಾರೂ ಇರಲಿಲ್ಲ. ಆದರೆ ಮಗುವಿನ ಜೊತೆಗೆ ಒಬ್ಬಾತ ಬಂದಿದ್ದು ಹೌದು ಎನ್ನುವ ಮಾಹಿತಿ ಲಭಿಸಿತ್ತು. ಅಲ್ಲದೆ, ವಿಡಿಯೋದಲ್ಲಿ ಸಾಕ್ಷಿಯಾಗಿ ಅಲ್ಲಿನ ಚಿತ್ರಣಗಳೂ ಇದ್ದವು.
ಸೈಬರ್ ಪೊಲೀಸ್ ಸಹಾಯ ಪಡೆದು ಆತನ ನಂಬರ್ ಟ್ರೇಸ್ ಮಾಡಿ ಲೊಕೇಶನ್ ನೋಡಿದಾಗ, ಕಾವೂರು ಶಾಂತಿನಗರ ತೋರಿಸಿತ್ತು. ಕೂಡಲೇ ಕಾವೂರು ಠಾಣೆಗೆ ತಿಳಿಸಿ, ಪಣಂಬೂರು ಠಾಣೆಯ ಇನ್ನೊಂದು ತಂಡವನ್ನು ಆ ಜಾಗಕ್ಕೆ ಇನ್ಸ್‌ಪೆಕ್ಟರ್ ಕಳಿಸಿಕೊಟ್ಟಿದ್ದರು. ಫಕೀರಪ್ಪ ಶರಣಪ್ಪ ಮತ್ತು ರಾಕೇಶ್ ಅವರಿದ್ದ ಪಣಂಬೂರು ಪೊಲೀಸರು ಹತ್ತು ನಿಮಿಷದಲ್ಲಿ ಅಲ್ಲಿಗೆ ತಲುಪಿ ಮನೆ ಪತ್ತೆ ಮಾಡಿದ್ದರು. ಮನೆಗೆ ಬಾಗಿಲು ಹಾಕಿದ್ದು ಹೊರಗಿನಿಂದ ಬಡಿದರೂ ಸ್ಪಂದನೆ ಬರಲಿಲ್ಲ. ಹೀಗಾಗಿ ಇನ್ಸ್‌ಪೆಕ್ಟರ್ ಸೂಚನೆಯಂತೆ, ಮನೆ ಬಾಗಿಲು ಒಡೆದು ಒಳಗೆ ಹೋಗಿದ್ದು, ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ಸಿದ್ಧತೆ ಮಾಡಿದ್ದ. ಪೊಲೀಸರು ಕೂಡಲೇ ಆತನನ್ನು ಹಿಡಿದುಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಸಾಯುತ್ತಿದ್ದ ತಂದೆ- ಮಗಳನ್ನು ರಕ್ಷಣೆ ಮಾಡಿದ್ದಾರೆ. ಎರಡು ನಿಮಿಷ ತಡವಾದರೂ ಪ್ರಾಣ ಹೋಗುತ್ತಿತ್ತು.
ಕಾವೂರು ಠಾಣೆಯಲ್ಲಿ ಮಂಗಳವಾರ ಗಂಡ-ಹೆಂಡತಿ ಇಬ್ಬರನ್ನೂ ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಮಾತುಕತೆ ನಡೆಸಿದ್ದಾರೆ. ಆದರೆ ಅವನೊಂದಿಗೆ ಇರುವುದಕ್ಕೆ ಪತ್ನಿ ಒಪ್ಪಲಿಲ್ಲ. ತನಗೆ ಸಾಕಾಗಿ ಹೋಗಿದೆ, ಬೇರೆಯಾಗಿ ಇರುತ್ತೇವೆ, ಡೈವರ್ಸ್ ಕೊಡುತ್ತೇನೆ. ಮಗುವನ್ನು ತಾನೇ ಸಾಕುತ್ತೇನೆ ಎಂದು ಹೇಳಿದ್ದಾಳೆ. ಡೈವರ್ಸ್ ಕೊಟ್ಟು ಬೇರೆಯಾಗಿಯೇ ಇರಿ, ಯಾಕೆ ಸಾಯ್ತಿರಿ ಎಂದು ಪೊಲೀಸರು ಬುದ್ದಿ ಹೇಳಿದ್ದಾರೆ. ಗಂಡ ರಾಜೇಶ್ ಒಟ್ಟಿಗೆ ಬದುಕುತ್ತೇವೆ ಎಂದರೂ ಹೆಂಡತಿ ಕೇಳಲಿಲ್ಲ. ಬಳಿಕ ಇಬ್ಬರನ್ನೂ ಕಳಿಸಿಕೊಟ್ಟಿದ್ದಾರೆ. ಸದ್ಯ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರ ತ್ವರಿತ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.