ಬಂಟ್ವಾಳ: ತುರ್ತು ಸಂದರ್ಭ ಸಮಯೋಚಿತವಾಗಿ ಸೂಕ್ತ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡುವ ಮೂಲಕ ಅಮೂಲ್ಯ ಜೀವ ಉಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಗೆ ಇಂಥ ತರಬೇತಿ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರೂ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಪಡೆಯುವುದು ಅಗತ್ಯ ಎಂದು ಬಂಟ್ವಾಳ ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ್ ಹೇಳಿದರು.
ವಿಶ್ವ ಹೃದಯ ದಿನದ ಅಂಗವಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬಂಟ್ವಾಳ ತಾಪಂ ಕಚೇರಿಯ ಸಿಬ್ಬಂದಿಗಾಗಿ ನಡೆದ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫಾದರ್ ಮುಲ್ಲರ್ ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಉಜ್ವಲ್ ಸುವರ್ಣ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದರು. ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ.ರೀನಾ ವಿಲ್ಮಾ ಫ್ರಾಂಕ್, ಹೃದಯಾಘಾತದಂಥ ತುರ್ತು ಸಂದರ್ಭ ಕೈಗೊಳ್ಳಬೇಕಾದ ಕ್ರಮ ಹಾಗೂ ತುರ್ತು ಚಿಕಿತ್ಸೆ ಮೂಲಕ ವ್ಯಕ್ತಿಯ ಜೀವ ಹೇಗೆ ರಕ್ಷಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.
ನರ್ಸಿಂಗ್ ಅಧೀಕ್ಷಕಿ ಸಿಲ್ವಿಯಾ ನಿಶಾ ಲೋಬೋ, ಪ್ರಾಧ್ಯಾಪಕಿ ಜಾನೆಟ್ ಸಿಕ್ವೇರಾ, ಉಪನ್ಯಾಸಕಿ ಸುಷ್ಮಾ, ಸೌಲಭ್ಯ ಸಂಯೋಜಕ ಜೇಸನ್ ಕರ್ಕಡ ಹಾಗೂ ತ್ರಿವೇಣಿ ಉಪಸ್ಥಿತರಿದ್ದರು.