ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನಗರದ ಮುಖ್ಯ ಭಾಗದಲ್ಲಿರುವ ಅಂಗೈಯಗಲದ ಜಾಗ, ಅದರಲ್ಲೇ ನಳನಳಿಸುತ್ತಿರುವ ವಿವಿಧ ತರಕಾರಿಗಳು. ಮನೆ ನಿರ್ಮಾಣಕ್ಕೆಂದು ಇಟ್ಟಿದ್ದ ಜಮೀನೀಗ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಇದು ತೋಟಗಾರಿಕಾ ಇಲಾಖೆಯ ನಿವೃತ್ತ ನೌಕರನ ಕೃಷಿ ಪ್ರೇಮದ ಫಲ.
ತೊಕ್ಕೊಟ್ಟು ಜಂಕ್ಷನ್ನಿಂದ ನೂರಡಿ ದೂರದಲ್ಲಿದೆ ಸಿರಿಲ್ ರಾಬರ್ಟ್ ಡಿಸೋಜ ಮನೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ಹೃದಯ ಭಾಗದಲ್ಲಿರುವ ಈ ಜಾಗದ ಇಂಚಿಂಚಿಗೂ ಬಂಗಾರದ ಬೆಲೆಯಿದೆ. ತೋಟಗಾರಿಕಾ ಇಲಾಖೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ 3 ವರ್ಷದ ಹಿಂದೆ ನಿವೃತ್ತರಾಗಿರುವ ಸಿರಿಲ್ ಅವರು ಭಟ್ನಗರದಲ್ಲಿ ವಾಸವಿದ್ದಾರೆ.
ತಮ್ಮ ಮನೆಯಂಗಳ ಹಸಿರನ್ನಾಗಿಸಲು ಜಮೀನಿಲ್ಲ ಎನ್ನುವ ಕೊರಗು ನೀಗಿಸಿಕೊಂಡಿದ್ದು ಮನೆಯ ಹಿಂಬಾಗದಲ್ಲಿರುವ ಅಣ್ಣನ ನಾಲ್ಕು ಸೆಂಟ್ಸ್ ಜಮೀನಿನ ಮೂಲಕ. ಮನೆ ನಿರ್ಮಾಣಕ್ಕೆಂದು ಇಟ್ಟಿದ್ದ ಈ ಜಮೀನಿನ ಬಳಿ ಭಾರಿ ವಾಹನಗಳ ಸಂಚಾರಕ್ಕೆ ಬೇಕಾದಷ್ಟು ಅಗಲದ ರಸ್ತೆ ಇಲ್ಲದ ಕಾರಣ ಪರಿಕರಗಳ ಸಾಗಾಟ ಅಸಾಧ್ಯವಾಗಿದ್ದರಿಂದ ಜಾಗ ಪಾಳು ಬಿದ್ದಿತ್ತು.
ಈ ಜಾಗವನ್ನೇ ಆಯ್ಕೆ ಮಾಡಿಕೊಂಡ ಸಿರಿಲ್ ಅವರ ಹಸಿರಿನ ಮೂಲಕ ಜಮೀನಿಗೆ ಜೀವ ಕೊಡುವ ಪ್ರಯತ್ನ ಫಲ ನೀಡಿದೆ. ಅಲಸಂಡೆ, ಸೌತೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ ಸಹಿತ ಫಲಪುಷ್ಪಗಳ ಬೀಜಗಳನ್ನು ಬಿತ್ತಿ ಆರೈಕೆ ಮಾಡಿದ್ದರಿಂದ ಇಲ್ಲೀಗ ಸಮೃದ್ಧ ಬೆಳೆ ಎದ್ದು ನಿಂತಿದೆ. ತರಕಾರಿಗಳನ್ನು ಮಾರಾಟ ಮಾಡದೆ, ಕುಟುಂಬಸ್ಥರು, ಸ್ನೇಹಿತರಿಗೆ ನೀಡಿ ತೃಪ್ತಿ ಕಾಣುತ್ತಿದ್ದಾರೆ. ಈ ಬೆಳೆ ಒಂದು ಹಂತದಲ್ಲಿ ಮುಗಿದ ಬಳಿಕ ಬಸಳೆ ಬೆಳಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ. ನಗರ ವ್ಯಾಪ್ತಿಯಲ್ಲಿರುವ ಜಮೀನೀಗ ವಾಣಿಜ್ಯದ ಬದಲು ಕೃಷಿ ಜಮೀನಿನ ರೂಪ ತಳೆದಿದೆ.
ಹಸಿರಿದ್ದರೆ ಉಸಿರು ಇರುತ್ತದೆ ಎನ್ನುವ ಮಾತು ನಂಬಿ ಗಿಡಗಳನ್ನು ನೆಟ್ಟು ಅದರಿಂದ ಬರುವ ಫಲವನ್ನು ನೋಡಿ ಆನಂದ ಪಡುವುದು ನನ್ನ ಹವ್ಯಾಸ. ಪಾಳು ಜಾಗದಲ್ಲಿ ಸಣ್ಣ ತೋಟ ನಿರ್ಮಿಸಿದ್ದು, ಅದರಿಂದ ಫಲ ಬಂದಿರುವುದು ತುಂಬಾ ಸಂತಸ ತಂದಿದೆ.ಸಿರಿಲ್ ರಾಬರ್ಟ್ ಡಿಸೋಜ, ನಿವೃತ್ತ ನೌಕರ